ಸರ್ಕಸ್ ತುಳುಸಿನಿಮಾ – ಮಸ್ಕತ್‍ನ ಸಿನಿಪ್ರೇಕ್ಷಕರಿಂದ ಸಿನಿಮಾ ಬಗ್ಗೆ ಮೆಚ್ಚುಗೆ

ತುಳುವಿನ ಬಹುನಿರೀಕ್ಷೆಯ ಸಿನಿಮಾ ಸರ್ಕಸ್, ರೂಪೇಶ್ ಶೆಟ್ಟಿ ನಿರ್ದೇಶನದ ಸಿನಿಮಾವಾಗಿದ್ದು, ವಿದೇಶಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಿದ್ದು, ಸಿನಿ ಪ್ರೇಕ್ಷಕರು ಫುಲ್ ಮಾಕ್ರ್ಸ್ ನೀಡಿದ್ದಾರೆ. ತುಳು ಸಿನಿಮಾರಂಗದ ರಾಕ್ ಸ್ಟಾರ್ ಬಿಗ್‍ಬಾಸ್ 9ರ ವಿಜೇತ ರೂಪೇಶ್ ಶೆಟ್ಟಿ ನಿರ್ದೇಶನದ ಹೊಚ್ಚ ಹೊಸ ಮತ್ತು ಹಾಸ್ಯಮಯ ಸಿನಿಮಾ ಸರ್ಕಸ್. ಈಗಾಗಲೇ ಕರಾವಳಿಯಲ್ಲಿ ಸಿನಿಮಾ ಬಿಡುಗಡೆಗೆ ಎಲ್ಲಾ ತಯಾರಿಯನ್ನು ಚಿತ್ರತಂಡ ಮಾಡಿಕೊಂಡಿದೆ.

ದುಬೈ, ಅಬುಧಾಬಿ, ಪುಣೆಯಲ್ಲಿ ಸರ್ಕಸ್ ಸಿನಿಮಾ ಯಶಸ್ವಿಯಾಗಿ ಪ್ರೀಮಿಯರ್ ಶೋ ನಡೆದಿದ್ದು, ಸಿನಿ ಪ್ರೇಕ್ಷಕರು ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದೀಗ ಮಸ್ಕತ್‍ನಲ್ಲೂ ಸರ್ಕಸ್ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಸರ್ಕಸ್ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಸರ್ಕಸ್ ಸಿನಿಮಾ ಹಾಸ್ಯವೇ ಪ್ರಧಾನ ವಸ್ತುವಾಗಿದೆ. ರೂಪೇಶ್ ಶೆಟ್ಟಿ ನಿರ್ದೇಶಿಸಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ರಾಕೇಶ್ ಕದ್ರಿ ಕ್ರಿಯೆಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ತುಳು ಚಿತ್ರರಂಗದ ಘಟಾನುಘಟಿ ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ್, ನಿತೇಶ್ ಶೆಟ್ಟಿ ಎಕ್ಕಾರ್, ರೂಪಾ ವರ್ಕಾಡಿ, ಪಂಚಮಿ ಭೋಜರಾಜ್, ತಾರಾಗಣದಲ್ಲಿದ್ದಾರೆ. ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್ ಲಾಂಛನದಡಿಯಲ್ಲಿ ಸರ್ಕಸ್ ಸಿನಿಮಾ ತಯಾರಾಗಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮಂಜುನಾಥ ಅತ್ತಾವರ ಈ ಚಿತ್ರವನ್ನು ನಿರ್ಮಿಸಿದ್ದಾರೆ.
