ಅಧಿಕಾರ ನಡೆಸುವುದು ಬಿಡಿ,ವಿರೋಧ ಪಕ್ಷದ ಸ್ಥಾನದಲ್ಲೂ ಕೂರಲು BJP ನಾಲಾಯಕ್ಕು – ಜಿ ಎನ್ ನಾಗರಾಜ್

ರಾಜ್ಯದ ಜನತೆ ನೀಡಿದ ಜನಾದೇಶಕ್ಕೆ ವಿರುದ್ಧವಾಗಿ ಅಕ್ರಮ ಸರಕಾರ ರಚಿಸಿ ಜನತೆಯ ಬದುಕನ್ನು ಮೂರಾಬಟ್ಟೆಯನ್ನಾಗಿಸಿ ರಾಜ್ಯದ ಖಜಾನೆಯನ್ನು ಲೂಟಿ ಮಾಡಿದೆ.40% ಕಮಿಷನ್ ಸರಕಾರವೆಂದು ತನ್ನವರಿಂದಲೇ ಕರೆಸಿಕೊಂಡ BJP,ನಾಡಿನ ಸೌಹಾರ್ದತೆಯನ್ನು ನಾಶ ಮಾಡಿದೆ.ಇಂತಹ BJP,ಸರಕಾರ ನಡೆಸುವುದು ಬಿಡಿ ವಿರೋಧ ಪಕ್ಷದ ಸ್ಥಾನದಲ್ಲೂ ಕೂರಲು ನಾಲಾಯಕ್ಕು ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಸ್ಥಾಪಕಾಧ್ಯಕ್ಷರಾದ ಜಿ ಎನ್ ನಾಗರಾಜ್ ರವರು ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಅವರು ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಇಂದು ಮಂಗಳೂರಿನಲ್ಲಿ ಜರುಗಿದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಮಾತುಗಳನ್ನು ಹೇಳಿದರು.

ಸಮಾಜದ ಆರ್ಥಿಕ ಚಕ್ರ ತಿರುಗುವಲ್ಲಿ ಪ್ರಧಾನ ಪಾತ್ರ ವಹಿಸುವ ಕಾರ್ಮಿಕ ವರ್ಗವನ್ನು ತೀರಾ ನಿರ್ಲಕ್ಷ್ಯ ವಹಿಸುವ ಆಳುವ ವರ್ಗದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಪ್ರಬಲ ಚಳುವಳಿ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಮೇ ದಿನಾಚರಣೆಯನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ವಿವಿಧ ವಿಭಾಗದ ಕಾರ್ಮಿಕರನ್ನು, ಹಿತೈಷಿ ಗಳನ್ನು ಸೇರಿಸಿಕೊಂಡು ರಚಿಸಲಾದ ಮೇ ದಿನ ಆಚರಣಾ ಸಮಿತಿಯ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮುಂದುವರಿಸುತ್ತಾ ಅವರು, ಅಂಬಾನಿ ಅಧಾನಿಗಳ ಸಂಪತ್ತನ್ನು ವೃದ್ಧಿಸಲು ಪೆಟ್ರೋಲ್ ಡಿಸೇಲ್ ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ ಆಗುತ್ತಿದೆಯೇ ಹೊರತು ಜನಸಾಮಾನ್ಯರ ಬದುಕನ್ನು ರಕ್ಷಿಸಲು ಅಲ್ಲ. ಜನಸಾಮಾನ್ಯರಿಂದ ವಿಪರೀತ ತೆರಿಗೆ ಸಂಗ್ರಹಿಸುವ ಮೋದಿ ಸರಕಾರ ಶ್ರೀಮಂತ ಉದ್ಯಮಿಗಳಿಗೆ, ಕಾರ್ಪೊರೇಟ್ ಕಂಪೆನಿಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿದೆ. ಇಂತಹ ಫ್ಯಾಸಿಸ್ಟ್ ಜನವಿರೋಧಿ ಸರಕಾರ ಮತ್ತೆ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೇರಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು, ಇವರನ್ನು ಕಿತ್ತೆಸೆಯಲು ಕಾರ್ಮಿಕ ವರ್ಗ ಒಂದಾಗಿ ನಿಲ್ಲಬೇಕೆಂದು ಕರೆ ನೀಡಿದರು

CITU ದ. ಕ.ಜಿಲ್ಲಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿಯವರು ಮಾತನಾಡುತ್ತಾ ತ್ಯಾಗ ಬಲಿದಾನದ ಪರಂಪರೆ ಹೊಂದಿದ ಮೇ ದಿನಾಚರಣೆಯ ಮಹತ್ವವನ್ನು ಇಲ್ಲವಾಗಿಸಲು ಆಳುವ ವರ್ಗ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ.ವಿಪರೀತ ಲಾಭ ಮಾಡುವ ಉದ್ದೇಶದಿಂದಲೇ ಕಾರ್ಪೊರೇಟ್ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವ ಮೋದಿ ಸರಕಾರ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಮರೆತಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CITU ದ. ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮೇ ದಿನದ ಮಹತ್ವವನ್ನು ಸಾರುತ್ತಾ, ಕೊರೋನ ಸಂಕಷ್ಟದ ಕಾಲದಲ್ಲಿ ತೀರಾ ಅನ್ಯಾಯ ಮಾಡಿದ ರಾಜ್ಯದ BJP ಸರಕಾರ ಅನೇಕ ವಿಧದ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಮಾಲಕ ವರ್ಗದ ಕೃಪಾಕಟಾಕ್ಷಕ್ಕೆ ಒಳಗಾಗಿದೆ.ರಾಜ್ಯದಲ್ಲಿ 70 ಲಕ್ಷ ಕಾರ್ಮಿಕರು ಈ ಶ್ರಮ್ ಯೋಜನೆಗೆ ನೋಂದಾವಣೆ ಆಗಿದ್ದರೂ ಇವತ್ತಿನವರೆಗೆ ಯಾವುದೇ ಸೌಲಭ್ಯಗಳು ದೊರೆತಿಲ್ಲ.ಸ್ಕೀಮ್ ಕಾರ್ಮಿಕರು,ಗುತ್ತಿಗೆ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ಸಂಕಷ್ಟವನ್ನು ಹೇಳತೀರದಾಗಿದೆ.ರಾಜ್ಯದ ಸಾರ್ವಜನಿಕ ಉದ್ದಿಮೆಗಳನ್ನು ಸಂಪೂರ್ಣವಾಗಿ ಖಾಸಗಿಯವರ ತೆಕ್ಕೆಗೆ ಒಪ್ಪಿಸಿದ BJP ಸರಕಾರ ರಾಜ್ಯದ ಆರ್ಥಿಕತೆಯನ್ನು ಸರ್ವನಾಶ ಮಾಡಿದೆ. ಜನತೆಯ ಬದುಕನ್ನು ರಾಜ್ಯದ ಆರ್ಥಿಕತೆ ಹಾಗೂ ಸೌಹಾರ್ದತೆಯನ್ನು ಹಾಳುಗೆಡವಿದ ಡಬ್ಬಲ್ ಇಂಜಿನ್ ಸರಕಾರ ಡಬ್ಬ ಇಂಜಿನ್ ಸರಕಾರವಾಗಿದೆ. ಇಂತಹ ಇಂಜಿನ್ ಇಲ್ಲದ ಗುಜಿರಿ ಸರಕಾರವನ್ನು ಕಿತ್ತೊಗೆಯಲು ರಾಜ್ಯದ ಕಾರ್ಮಿಕ ವರ್ಗ ಮೇ 10ರಂದು ಬಳಸುವ ಬೆರಳಿನಿಂದ ಒತ್ತುವ ಬಟನ್ ರಾಜ್ಯದ,ಜಿಲ್ಲೆಯ ಭವಿಷ್ಯವನ್ನು ನಿರ್ಮಾಣ ಮಾಡಲು ಸಾಧ್ಯವಾಗಬೇಕು ಎಂದು ಹೇಳಿದರು.

CITU ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿ,ಬ್ಯಾಂಕ್ ನೌಕರರ ರಾಜ್ಯ ನಾಯಕರಾದ ನಾಗರಾಜ್ ಶ್ಯಾನಭಾಗ್ ರವರು ಮಾತನಾಡುತ್ತಾ ಅಚ್ಚೇ ದಿನ್ ತರುವುದಾಗಿ ವಾಗ್ಧಾನವಿತ್ತ ಮೋದಿ ಸರಕಾರ ತನ್ನ ಅಧಿಕಾರಾವಧಿಯಲ್ಲಿ ಕಾರ್ಪೋರೇಟ್ ಪರ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ ಆರ್ಥಿಕತೆಯನ್ನು ನಾಶಗೊಳಿಸಿದೆ ಎಂದು ಹೇಳಿದರು

ಸಭೆಯ ಅಧ್ಯಕ್ಷತೆಯನ್ನು ಮೇ ದಿನ ಆಚರಣಾ ಸಮಿತಿಯ ಗೌರವಾಧ್ಯಕ್ಷರಾದ ಡಾ. ಕೃಷ್ಣಪ್ಪ ಕೊಂಚಾಡಿಯವರು ವಹಿಸಿದ್ದರು.ವೇದಿಕೆಯಲ್ಲಿ CITU ಹಿರಿಯ ಮುಖಂಡರಾದ ಯು ಬಿ ಲೋಕಯ್ಯ,ರಮಣಿ ಮೂಡಬಿದ್ರಿ,ಪದ್ಮಾವತಿ ಶೆಟ್ಟಿ, CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೋಗರು, ರಾಧಾ ಮೂಡಬಿದ್ರಿ,ಗಿರಿಜಾ, ನೋಣಯ್ಯ ಗೌಡ, ಸುಕುಮಾರ್,ಜನವಾದಿ ಮಹಿಳಾ ಸಂಘಟನೆಯ ನಾಯಕಿ ಜಯಂತಿ ಶೆಟ್ಟಿ,DYFI ನಾಯಕರಾದ ಸಂತೋಷ್ ಬಜಾಲ್,SFI ಮುಖಂಡರಾದ ವಿನೀತ್ ದೇವಾಡಿಗ,ವಕೀಲರ ಸಂಘಟನೆಯ ಮುಖಂಡರಾದ ಯಶವಂತ ಮರೋಳಿ,ನಿತಿನ್ ಕುತ್ತಾರ್,ದಲಿತ ಸಂಘಟನೆಯ ಹಿರಿಯ ಮುಖಂಡರಾದ ಎಂ ದೇವದಾಸ್,ಬೀದಿಬದಿ ವ್ಯಾಪಾರಸ್ಥರ ಸಂಘದ ನಾಯಕರಾದ ಮಹಮ್ಮದ್ ಮುಸ್ತಫಾ, ಬಂದರು ಶ್ರಮಿಕ ಸಂಘದ ಹಿರಿಯ ನಾಯಕರಾದ ವಿಲ್ಲಿ ವಿಲ್ಸನ್ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ರೊಯ್ ಖ್ಯಾಸ್ಥಲಿನೋ,ಎರಿಕ್ ಲೋಬೋ,ಪದ್ಮನಾಭ ಕೋಟ್ಯಾನ್,ಗಂಗಯ್ಯ ಅಮೀನ್,ವಸಂತಿ ಕುಪ್ಪೆಪದವು,ಸದಾಶಿವ ದಾಸ್, ಭಾರತಿ ಬೋಳಾರ,ಸುಂದರ ಕುಂಪಲ, ರೋಹಿದಾಸ್ ತೊಕ್ಕೊಟ್ಟು,ರಘು ಎಕ್ಕಾರು, ವಾಸುದೇವ ಉಚ್ಚಿಲ್ ಮುಂತಾದವರು ಹಾಜರಿದ್ದರು .

ಪ್ರಾರಂಭದಲ್ಲಿ ಯೋಗೀಶ್ ಜಪ್ಪಿನಮೋಗರು ಸ್ವಾಗತಿಸಿದರೆ, ಕೊನೆಯಲ್ಲಿ ರಾಧಾ ಮೂಡಬಿದ್ರಿಯವರು ವಂದಿಸಿದರು.ಬಿ ಕೆ ಇಮ್ತಿಯಾಜ್ ರವರು ಕಾರ್ಯಕ್ರಮ ನಿರೂಪಿಸಿದರು

Related Posts

Leave a Reply

Your email address will not be published.