ಕಾರ್ಮಿಕ ವರ್ಗವಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ – ಎಸ್ ವರಲಕ್ಷ್ಮಿ

ಸಮಾಜದಲ್ಲಿ ಸಂಪತ್ತು ಸ್ರಷ್ಠಿಸುವ ಕಾರ್ಮಿಕ ವರ್ಗ ಮಾತ್ರವೇ ದೇಶದ ಆರ್ಥಿಕ ವ್ಯವಸ್ಥೆಯನ್ನು ಮುಂದಕ್ಕೊಯ್ಯುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ.ಆದರೆ ದೇಶವನ್ನಾಳುವ ನರೇಂದ್ರ ಮೋದಿ ಸರಕಾರವು ಕಾರ್ಮಿಕ ವರ್ಗವನ್ನು ನಗಣ್ಯ ಮಾಡಿ ಇಡೀ ಆರ್ಥಿಕ ವ್ಯವಸ್ಥೆಯನ್ನು ದೇಶದ ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆದು, ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುವ ಮೂಲಕ ಕಾರ್ಮಿಕ ವರ್ಗವನ್ನೇ ಇನ್ನಿಲ್ಲವಾಗಿಸಲು ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ. ದೇಶದ ಕಾರ್ಮಿಕ ವರ್ಗವನ್ನು ಪ್ರತಿನಿಧಿಸುವ ಕೇಂದ್ರ ಕಾರ್ಮಿಕ ಸಂಘಟನೆಗಳನ್ನು ಕೈಬಿಟ್ಟು ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನಡೆಸುವ ಮೂಲಕ ನರೇಂದ್ರ ಮೋದಿ ಸರಕಾರದ ನಿಜವಾದ ಗುಣಲಕ್ಷಣಗಳು ಬಹಿರಂಗಗೊಂಡಿದೆ. ಮಾತೆತ್ತಿದರೆ ಅಭಿವೃದ್ಧಿಯ ಮಂತ್ರ ಜಪಿಸುವ ಕೇಂದ್ರ ಸರಕಾರಕ್ಕೆ ಕಾರ್ಮಿಕ ವರ್ಗವಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ ಎಂಬ ಸತ್ಯಾಂಶ ತಿಳಿಯಬೇಕಾಗಿದೆ.ಹೆಜ್ಜೆಹೆಜ್ಜೆಗೂ ಕಾರ್ಮಿಕರ ಬದುಕಿಗೆ ಮಾರಕ ಹೊಡೆತ ನೀಡುವ ಕೇಂದ್ರ ಸರಕಾರ ತನ್ನ ಆರ್ಥಿಕ ನೀತಿಗಳನ್ನು ಕೂಡಲೇ ಬದಲಿಸಬೇಕು ಇಲ್ಲದಿದ್ದರೆ ಸರಕಾರವನ್ನೇ ಬದಲಿಸಲು ಕಾರ್ಮಿಕ ವರ್ಗ ಸನ್ನದ್ದವಾಗಬೇಕಾಗಿದೆ ಎಂದು CITU ಕರ್ನಾಟಕ ರಾಜ್ಯಾಧ್ಯಕ್ಷರಾದ ಎಸ್ ವರಲಕ್ಷ್ಮಿಯವರು ಜಿಲ್ಲೆಯ ಕಾರ್ಮಿಕ ವರ್ಗಕ್ಕೆ ಕರೆ ನೀಡಿದರು.

ಅವರು ನಗರದ ಬೋಳಾರದಲ್ಲಿರುವ ಕಾಂ.ಬಿ.ಮಾಧವ ವೇದಿಕೆ ಹಾಗೂ ಕಾಂ.ಗಿರಿಯಪ್ಪ ಉಳ್ಳಾಲ ಸಭಾಂಗಣದಲ್ಲಿ ಜರುಗಿದ CITU 17ನೇ ದ.ಕ.ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.

ಸಮ್ಮೇಳನದ ಪ್ರಾರಂಭದಲ್ಲಿ ಧ್ವಜಾರೋಹಣಗೈದ CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡುತ್ತಾ, ದುಡಿಯುವ ವರ್ಗದ ಆಶಾಕಿರಣವಾದ ಕೆಂಬಾವುಟವು ಜಗತ್ತಿನ ಕಾರ್ಮಿಕ ವರ್ಗಕ್ಕೆ ಹೊಸ ಚೈತನ್ಯ ಮೂಡಿಸುವ ಹಾಗೂ ಭರವಸೆಯ ಬೆಳಕನ್ನು ನೀಡುವ ಮಹಾಶಕ್ತಿಯಾಗಿದೆ. ದುಡಿಯುವ ವರ್ಗದ ಪರವಾಗಿ ಧ್ರಢವಾಗಿ ನಿಂತು, ಅವರ ಉತ್ತಮ ಬದುಕಿಗಾಗಿ ಸದಾ ಶ್ರಮಿಸುತ್ತಾ ದೇಶದ ಸರ್ವತೋಮುಖ ಬೆಳವಣಿಗೆಗೆ ಕೆಂಬಾವುಟ ಒಂದೇ ದಾರಿ.ದೇಶವನ್ನು ಒಂದಾಗಿಸಲು,ಸೌಹಾರ್ದತೆ ಮೆರೆಯಲು ಭವ್ಯ ಭಾರತದ ನಿರ್ಮಾಣ ಕಾರ್ಮಿಕ ವರ್ಗದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಜಿಲ್ಲೆಯ ರೈತ ಚಳುವಳಿಯ ನಾಯಕರಾದ ಕೆ.ಯಾದವ ಶೆಟ್ಟಿಯವರು ರೈತ ಕಾರ್ಮಿಕರ ಸಖ್ಯತೆಯ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಶುಭಕೋರಿ ಮಾತನಾಡಿದರು.

ವೇದಿಕೆಯಲ್ಲಿ CITU ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿ,ಪದ್ಮಾವತಿ ಶೆಟ್ಟಿ, ಕಾರ್ಮಿಕ ಚಳುವಳಿಯ ಹಿರಿಯ ನಾಯಕರಾದ ಯು.ಬಿ.ಲೋಕಯ್ಯರವರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಸ್ವಾಗತಿಸಿ,ಬಳಿಕ ಕಾರ್ಯಕ್ರಮ ನಿರ್ವಹಿಸಿದರು.ಅಗಲಿದ ಸಂಗಾತಿಗಳಿಗೆ ಶ್ರದ್ಧಾಂಜಲಿ ಅರ್ಪಿಸುವ ನಿರ್ಣಯವನ್ನು CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರುರವರು ಮಂಡಿಸಿದರು.

ಬಳಿಕ ಜರುಗಿದ ಪ್ರತಿನಿಧಿ ಅಧಿವೇಶನದಲ್ಲಿ ಜಿಲ್ಲೆಯ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ಮುಂಬರುವ ದಿನಗಳಲ್ಲಿ ಬಲಿಷ್ಠವಾದ ಕಾರ್ಮಿಕ ಚಳುವಳಿಯನ್ನು ಕಟ್ಟಲು ಸಮ್ಮೇಳನವು ಪಣ ತೊಟ್ಟಿತು.

vip's last bench

Related Posts

Leave a Reply

Your email address will not be published.