ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್‍ನಿಂದ ಪ್ರತಿಭಟನೆ : ಗ್ಯಾಸ್ ಸಿಲಿಂಡರ್ ಮತ್ತು ಕಟ್ಟಿಗೆಯ ಅಣುಕು ಶವ ಯಾತ್ರೆ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ ಏರಿಕೆ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫಲ್ಯ ವನ್ನು ಖಂಡಿಸಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಂಗಳೂರು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತಲ್ಲದೆ, ಗ್ಯಾಸ್ ಸಿಲಿಂಡರ್ ಮತ್ತು ಕಟ್ಟಿಗೆಯ ಅಣಕು ಶವ ಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ `ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾದರೂ ಕೂಡ ಬಿಜೆಪಿಗರು ತಲೆ ಕೆಡಿಸುತ್ತಿಲ್ಲ. ಯಾಕೆಂದರೆ ಬಿಜೆಪಿಗರು ಮತೀಯ ಭಾವನೆಯನ್ನು ಕೆರಳಿಸಿ ಮತ ಬಾಚುವ ಹುನ್ನಾರವನ್ನು ಮಾಡುತ್ತಿದ್ದಾರೆ. ಹಾಗಾಗಿ ಯಾವ ಕಾರಣಕ್ಕೂ ದ.ಕ.ಜಿಲ್ಲೆಯ ಬುದ್ಧಿವಂತ ಜನರು ಬಿಜೆಪಿಗರ ಮತೀಯ ಧ್ರುವೀಕರಣಕ್ಕೆ ಬಲಿಯಾಗಬಾರದು’ ಎಂದರು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ ನಲಪಾಡ್ ಮಾತನಾಡಿ `ರಾಜ್ಯ ಮತ್ತು ಕೇಂದ್ರದಲ್ಲಿರುವುದು ಪಿಕ್ ಪಾಕೆಟ್ ಸರಕಾರ. ಜನರ ಹಣವನ್ನು ಕೊಳ್ಳೆ ಹೊಡೆಯುವುದೇ ಬಿಜೆಪಿ ಸರಕಾರದ ಕಸುಬಾಗಿದೆ. ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡುತ್ತಲೇ ಶೇ.40ಕಮಿಷನ್ ಪಡೆದು ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಮೆದುಳಿಗೂ, ನಾಲಗೆಗೂ ಸಂಬಂಧವೇ ಇಲ್ಲ ಎಂಬಂತೆ ಮಾತನಾಡುತ್ತಿರುವುದು ವ್ಯವಸ್ಥೆಯ ದುರಂತ’ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಯುವ ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಅಲ್ಪಸಂಖ್ಯಾತರ ಘಟಕದ ದ.ಕ.ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಪಕ್ಷದ ಮುಖಂಡ ಎಂ.ಜಿ. ಹೆಗ್ಡೆ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ಎಐಸಿಸಿ ಸಂಯೋಜಕಿ ಲಾವಣ್ಯ ಬಲ್ಲಾಳ್, ಕಾಪೆರ್Çರೇಟರ್ ಅಬ್ದುಲ್ ರವೂಫ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ, ಅಭಿಷೇಕ್ ಬೆಳ್ಳಿಪ್ಪಾಡಿ, ಸೌಮ್ಯಲತಾ, ಕೆಪಿವೈಸಿ ಪ್ರಧಾನ ಕಾರ್ಯದರ್ಶಿ ಮೇರಿಲ್ ರೇಗೊ, ಆಶಿತ್ ಪಿರೇರಾ, ಕೆಪಿವೈಸಿ ಕಾರ್ಯದರ್ಶಿ ಸರ್ಫ್ರಾಝ್ ನವಾಝ್, ನಾಸಿರ್ ಸಾಮಣಿಗೆ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಪಕ್ಷದ ಮುಖಂಡರಾದ ಸುಹೈಲ್ ಕಂದಕ್, ಮಂಜುಳಾ ನಾಯಕ್, ಎನ್‍ಎಸ್‍ಯುಐ ದ.ಕ.ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಮತ್ತಿತರರು ಪಾಲ್ಗೊಂಡಿದ್ದರು.