ಕುಕ್ಕರ್ ಬಾಂಬ್ ಸ್ಫೋಟ : ಎನ್‍ಐಎಗೆ ಹಸ್ತಾಂತರಕ್ಕೆ ಕ್ರಮ

ಮಂಗಳೂರಿನ ನಾಗುರಿಯಲ್ಲಿ ಶನಿವಾರ ಆಟೋ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲು ಒಂದೆರಡು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮಂಗಳೂರಿನ ನಾಗುರಿಯ ಸ್ಫೋಟ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ನಗರ ಪೊಲೀಸ್ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಆರೋಪಿ ಶಾರೀಕ್ ನ ಆರೋಗ್ಯ ಸುಧಾರಣೆಗೆ ಹೆಚ್ಚಿನ ಗಮನಹರಿಸುವಂತೆ ವೈದ್ಯರೊಂದಿಗೆ ಸೂಚಿಸಿದ್ದೇನೆ. ಎಂಟು ಮಂದಿ ತಜ್ಞ ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆತ ಗುಣಮುಖನಾದ ಮೇಲೆ ಹೆಚ್ಚಿನ ವಿಚಾರಣೆ ನಡೆಯಲಿದೆ. ಆತನ ವಿಚಾರಣೆ ಬಳಿಕ ಕೃತ್ಯದ ಬಗ್ಗೆ ಇನ್ನಷ್ಟು ಮಾಹಿತಿ ಲಭಿಸಲಿದೆ ಎಂದರು. ಗಾಯಾಳು ರಿಕ್ಷಾ ಚಾಲಕರ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರಕಾರವೇ ಭರಿಸಲಿದೆ. ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಕೂಡ ಸರಕಾರದಿಂದ ಒದಗಿಸುವ ಬಗ್ಗೆ ಬೆಂಗಳೂರಿಗೆ ತೆರಳಿದ ಮೇಲೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.ಭಯೋತ್ಪಾದನಾ ಕೃತ್ಯಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲು ಕೇಂದ್ರ, ರಾಜ್ಯ ಸರಕಾರಗಳು ಗಮನ ಹರಿಸಿವೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಕೃತ್ಯಗಳು ಕಡಿಮೆಯಾಗಿವೆ ಎಂದರು.

Related Posts

Leave a Reply

Your email address will not be published.