ಮುಂಗಾರು ಮಳೆ ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಜ್ಜು : ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್
ಮುಂಗಾರು ಮಳೆ ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಜ್ಜಾಗಿದೆ. ಪ್ರಕೃತಿ ವಿಕೋಪ ಸಮರ್ಥವಾಗಿ ನಿರ್ವಹಿಸಲು ಬೇಕಾದ ಎಲ್ಲಾ ರೀತಿ ಸಿದ್ಧತೆಯನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್ ಹೇಳಿದರು.
ವಿ4ನ್ಯೂಸ್‍ನೊಂದಿಗೆ ಮಾತನಾಡಿದ ಅವರು, ಈಗಾಗಲೇ ಸ್ಪೀಕರ್ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದ್ದು, ಇದರಲ್ಲಿ ಸ್ಪೀಕರ್ ಅವರು ಕೆಲವೊಂದು ನಿರ್ದೇಶನಗಳನ್ನು ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗುವ ಪ್ರದೇಶ, ಬೆಟ್ಟಗುಡ್ಡ ಕುಸಿತವಾಗುವ ಸ್ಥಳಗಳನ್ನು ಮತ್ತು ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ.
ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ ಉಳ್ಳಾಲ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಎಸ್‍ಟಿ ಆರ್‍ಎಫ್ ಹಾಗೂ ಎನ್‍ಡಿಆರ್‍ಎಫ್, ತಾಲೂಕುಮಟ್ಟದ ತಂಡಗಳು, ಹಾಗೂ ಎನ್‍ಜಿಓ ತಂಡಗಳ ಮುಖಾಂತರ ಸ್ಥಳೀಯ ನಿವಾಸಿಗಳಿಗೆ ಮಾಹಿತಿ ಕೊಡುವ ಕೆಲಸ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿ, ಮಳೆ ಹಾನಿ,ಬೆಳೆಹಾನಿ ಹಾಗೂ ಪ್ರಾಣ ಹಾನಿ, ಜಾನುವಾರುಗಳ ಪ್ರಾಣಹಾನಿ ತಡೆಯಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಕಲ ಸಿದ್ಧತೆಯನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.
ಇನ್ನು ಸಿಥಿಲಗೊಂಡಿರುವ ಮರಗಳು ಕಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅದೇಶ ನೀಡಲಾಗಿದೆ. ವಿದ್ಯುತ್ ಕಂಬ, ತಂತಿಗಳನ್ನು ಭದ್ರಪಡಿಸುವುದು. ಇತ್ಯಾದಿ ಬಗೆ ಮೆಸ್ಕಾಂಗೆ ಸೂಚನೆ ನೀಡಲಾಗಿದೆ. ಕಾಲುವೆ ಪ್ರದೇಶಗಳಲ್ಲಿ ಹೂಳೆತ್ತುವ ಕಾರ್ಯ, ಚರಂಡಿಗಳ ದುರಸ್ತಿ, ರಸ್ತೆ ಅಂಚಿನ ಮರ ಗಿಡಗಳ ತೆರವು ಸಹಿತ ವಿವಿಧ ಕ್ರಮಗಳನ್ನು ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.
ಇದರ ಜೊತೆಯಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ನಿರ್ದೇಶನ ಕೊಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ 3 ಆ್ಯಂಬುಲೆನ್ಸ್‍ಗಳನ್ನು ಇಡಲಾಗಿದ್ದು, ಎಸ್‍ಟಿ ಆರ್‍ಎಫ್ ಹಾಗೂ ಎನ್‍ಡಿಆರ್‍ಎಫ್, ಗೃಹರಕ್ಷಕದಳ ವತಿಯಿಂದ ಯುವ ಈಜುಗಾರ ತಂಡವನ್ನು ಸಿದ್ಧತೆ ಮಾಡಲಾಗಿದೆ. ತಾಲೂಕುವಾರು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಲು ತಾಲೂಕು ಆಡಳಿತಕ್ಕೆ ಆದೇಶ ನೀಡಲಾಗಿದೆ. ಒಟ್ಟಾರೆ ಜಿಲ್ಲಾಡಳಿತ ಮುಂಗಾರು ಮಳೆ ಎದುರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.