ದ.ಕ. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತಿಗೆ ಬಲ: ಅಪರಾಧಿಗಳ ಪತ್ತೆಗೆ ನೂತನ  ಎಮ್‌ಸಿಸಿಟಿಎನ್‌ಎಸ್   ಪೋರ್ಟಬಲ್ ಸ್ಕ್ಯಾನರ್ ಬಳಕೆ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಜರುಗಬಹುದಾದ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ನೂತನ MCCTNS ( Mobile Crime and Criminal Tracking Network System) ಪೋರ್ಟಬಲ್ ಸ್ಕ್ಯಾನರ್ ಬಳಕೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ.

ನೂತನ ತಂತ್ರಜ್ಞಾನದ ಸ್ಕ್ಯಾನರ್  ಅನ್ನು  ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ  ಅಧಿಕಾರಿ/ಸಿಬ್ಬಂದಿ  ರಾತ್ರಿ ಗಸ್ತು ಕರ್ತವ್ಯದ ವೇಳೆ ಬಳಸಲಿದ್ದಾರೆ. ರಾತ್ರಿ ವೇಳೆ ಕಾಣಸಿಗುವ ಅಪರಿಚಿತ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಅಪರಾಧ ಹಿನ್ನೆಲೆಗಳ ಬಗ್ಗೆ ಹಿಂದೆ ನಡೆಸುತ್ತಿದ್ದ ಮೌಖಿಕ ವಿಚಾರಣೆಯ ಜೊತೆಗೆ ಯಾವುದೇ ವ್ಯಕ್ತಿ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ, ಆತನ ಬೆರಳಚ್ಚುಗಳನ್ನು ನೂತನ ತಂತ್ರಾಂಶದ ಮೂಲಕ ಪರಿಶೀಲಿಸುವ ಮೂಲಕ ಅಪರಾಧ ಹಿನ್ನೆಲೆಗಳ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಅದೇ ಸ್ಥಳದಲ್ಲಿ ಪಡೆಯಬಹುದಾಗಿದೆ ಎಂದು .. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಮಟೆ ವಿಕ್ರಂ ತಿಳಿಸಿದ್ದಾರೆ.

ಇಂತಹ ನೂತನ ತಂತ್ರಜ್ಞಾನ ವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಿರುವುದರಿಂದ  ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ತಕ್ಷಣ ಪತ್ತೆ ಹಚ್ಚಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ಪ್ರಕ್ರಿಯೆಗೆ ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.

Related Posts

Leave a Reply

Your email address will not be published.