ದೇರಳಕಟ್ಟೆ : ಪ್ರಾಕೃತಿಕ ವಿಕೋಪಗಳ ಕುರಿತು ತುರ್ತು ಸಭೆ

ಉಳ್ಳಾಲ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಪ್ರಾಕೃತಿಕ ವಿಕೋಪಗಳ ಕುರಿತು ತುರ್ತು ಸಭೆ ದೇರಳಕಟ್ಟೆಯ ಬಿಸಿಸಿ ಸಭಾಂಗಣದಲ್ಲಿ ನಡೆಯಿತು‌.

ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್‌ ಫರೀದ್ ಸಭೆ ಉದ್ದೇಶಿಸಿ ಮಾತನಾಡಿ, ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಎಲ್ಲಾ ಗ್ರಾಮಗಳಿಗೆ ಭೇಟಿಯಾಗಿ ಸಮಸ್ಯೆಗಳನ್ನು ಆಲಿಸಬೇಕು. ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿಗಳಿಗೆ ಇರುವ ಸಮನ್ವಯ ಕೊರತೆಗಳನ್ನು ಬಗೆಹರಿಸಬೇಕು. ಮುಂದಿನ ಒಂದು ತಿಂಗಳು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು ಜನರ ಸಮಸ್ಯೆಗಳಿಗೆ ಸ್ಪಂಧಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ.

ಮೇ ತಿಂಗಳ ಕೊನೆಯಲ್ಲಿ ಮಳೆಗಾಲ ಆರಂಭವಾಗಿದೆ. ನಿರಂತರ ಪ್ರಾಕೃತಿಕ ವಿಕೋಪಗಳು ನಡೆಯುತ್ತಲೇ ಬಂದಿದ್ದು, ಈ ಕುರಿತು ತುರ್ತು ಸಭೆ ನಡೆಸಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಪ್ರಾಕೃತಿಕ ವಿಕೋಪಗಳು ನಡೆದಾಗ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಅನ್ನುವ ನಿರ್ದೇಶನಗಳನ್ನು ನೀಡಲಾಗಿದೆ. ಎಲ್ಲೆಲ್ಲಾ ಹಾನಿಯಾಗಿದೆ, ಎಷ್ಟು ನಷ್ಟವುಂಟಾಗಿದೆ. ಸಾವು ನೋವಿನ ವಿಚಾರಗಳ ಕುರಿತು ಚರ್ಚಿಸಲಾಗಿದೆ. ಸರಕಾರ ಅವರಿಗೆ ಎಷ್ಟು ಪರಿಹಾರ ನೀಡಬೇಕು, ಅದು ಸಿಗದಿದ್ದಲ್ಲಿ ಮುಂದೆ ನಡೆಸಬೇಕಾದ ಕ್ರಮಗಳು. ಗ್ರಾ. ಪಂ. ಸದಸ್ಯರ ಮತ್ತು ಅಧಿಕಾರಿಗಳ ನಡುವೆ ಸಮನ್ವಯ ಕೊರತೆಗಳು ಉಂಟಾಗುತ್ತಿದೆ. ಅದನ್ನು ಬಗೆಹರಿಸಲು ಮತ್ತು ಸಮಸ್ಯೆಗಳನ್ನು ಪುನರ್‌ ವಿಮರ್ಶಿಸುವ ಸಲುವಾಗಿಯೂ ಚರ್ಚಿಸಲಾಗಿದೆ. ಮನೆಗಳಿಗೆ ಹಾನಿಯುಂಟಾದಾಗ ತಕ್ಷಣ ರೂ. ೬,೫೦೦ ಕಂದಾಯ ಇಲಾಖೆ ನೀಡಬೇಕಾಗಿದೆ. ಗ್ರಾಮಕರಣಿಕ ಬಂದು ಪರಿಶೀಲನೆ ನಡೆಸಿದ ನಂತರ ಇಂಜಿನಿಯರ್‌ ವರದಿ ಸಲ್ಲಿಸಿದ ಒಂದು ವಾರದ ಒಳಗೆ ನಷ್ಟ ಪರಿಹಾರವನ್ನು ನೀಡಬೇಕಾಗಿದೆ. ಜನರಿಗೆ ಸಮಸ್ಯೆಯಾದಲ್ಲಿ ಸ್ಥಳೀಯ ಪಂ.ಸದಸ್ಯರ ಮೂಲಕ ತನ್ನ ಗಮನಕ್ಕೆ ತರಬಹುದು. ಹೈಟೆನ್ಷನ್‌ ತಂತಿ, ಆರ್‌ ಡಿಪಿಆರ್‌ ಪೈಪ್‌, ಪೊಲೀಸ್‌ ವ್ಯವಸ್ಥೆಗಳಲ್ಲಿ ಪ್ರಸ್ತುತ ಸಂದರ್ಭ ತೊಂದರೆಗಳಾಗುತ್ತಿದ್ದು, ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳಾದ ಅರಣ್ಯ, ಮೆಸ್ಕಾಂ, ಆರ್‌ ಡಿಪಿಆರ್‌ , ಪಿಡಬ್ಲ್ಯುಡಿ, ಅಧಿಕಾರಿಗಳು ಜಂಟಿಯಾಗಿ ಜೊತೆಯಲ್ಲಿ ಎಲ್ಲಾ ಗ್ರಾಮಕ್ಕೆ ಭೇಟಿ ಅಲ್ಲಿರುವ ಸಮನ್ವಯ ಕೊರತೆಗಳನ್ನು ಬಗೆಹರಿಸಿಕೊಂಡು ಹೋಗಬೇಕೆಂದು ನಿರ್ದೇಶಿಸಲಾಗಿದೆ. ತಕ್ಷಣ ಅನಾಹುತಗಳು ಸಂಭವಿಸಿದಾಗ ಗ್ರಾ.ಪಂ.ಗಳಲ್ಲಿ ಅನುದಾನವಿರುವುದಿಲ್ಲ ಅನ್ನುವುದನ್ನು ಸದಸ್ಯರು ಗಮನಕ್ಕೆ ತಂದಿದ್ದಾರೆ. ಸ್ವಂತ ನಿಧಿಯಿಂದ ನೀಡಬೇಕಾಗಿದೆ. ಅದು ಕೂಡ ಕೆಲವು ಗ್ರಾಮಾಡಳಿತಗಳಲ್ಲಿ ಇರುವುದಿಲ್ಲ. ಅದಕ್ಕಾಗಿ ಸರಕಾರ ಜಿಲ್ಲಾಧಿಕಾರಿ ಮುಖಾಂತರ ತುರ್ತು ನಿಧಿ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಂದು ತಿಂಗಳ ಅವಧಿಗೆ ಸಕ್ರಿಯವಾಗಿರಬೇಕು. ಜನರಿಗೆ ತೊಂದರೆಯಾಗುವ ಸಂದರ್ಭ ಸ್ಪಂಧಿಸಬೇಕಿದೆ ಎಂದರು.

ತೊಕ್ಕೊಟ್ಟು ಬೃಹತ್‌ ಧ್ವಜಸ್ತಂಭದ ಅಡಿಯಲ್ಲಿ ತಾಲೂಕು ರಚನೆಯಾದ ಎರಡನೇ ವರ್ಷದ ಸ್ವಾತಂತ್ರ್ಯ ದಿನವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಎಲ್ಲಾ ಇಲಾಖೆಗಳು ಜಂಟಿಯಾಗಿ ಸೇರಿಕೊಂಡು ಪ್ರಮುಖವಾಗಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ತಹಶೀಲ್ದಾರ್‌ ನೇತೃತ್ವದಲ್ಲಿ ಉತ್ಸವ ಸಮಿತಿಯನ್ನು ರಚಿಸಲಾಗಿದೆ ಎಂದರು.


ಸ್ಪೀಕರ್‌ ಯು.ಟಿ .ಖಾದರ್‌ ಅವರು ಆ.2ರಂದು ಅಮೆರಿಕಾದಲ್ಲಿ ನಡೆಯಲಿರುವ ಸ್ಪೀಕರ್ಸ್‌ ಅಂತರಾಷ್ಟ್ರೀಯ ಕಾನ್ಫರೆನ್ಸ್‌ ನಲ್ಲಿ ಭಾಗವಹಿಸಲು ತೆರಳಲಿದ್ದಾರೆ. ಆ.10ರಂದು ವಾಪಸ್ಸಾಗಲಿರುವ ಅವರು ಸರಕಾರ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿದ್ದುಷ, ವಿಧಾನಪರಿಷತ್‌ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಆರು ಜನರ ನಿಯೋಗ ಕರ್ನಾಟಕದಿಂದ ಭಾಗಿಯಾಗಲಿದ್ದೇವೆ ಎಂದ ಅವರು ಸದ್ಯದ ಸ್ಥಿತಿಯಲ್ಲಿ ಹೋಗುವುದಾ? ಬೇಡವಾ? ಅನ್ನುವ ವಿಚಾರದಲ್ಲಿದ್ದು, ಇಂದು ಸ್ಪಷ್ಟಪಡಿಸಲಿರುವೆನು ಎಂದು ತಿಳಿಸಿದ್ದಾರೆ. ಈ ಸಂದರ್ಭ ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿ ಶೈಲಾ ಕಾರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್‌, ಸಹಾಯಕ ಪೊಲೀಸ್‌ ಆಯುಕ್ತ ಧನ್ಯಾ ನಾಯಕ್‌, ಉಳ್ಳಾಲ ತಾಲೂಕು ಉಪತಹಶೀಲ್ದಾರ್‌ ನವನೀತ್‌ ಮಾಳವ ಮೆಸ್ಕಾಂ ಎಇಇ ದಯಾನಂದ್‌, ಕೊಣಾಜೆ ಹಾಗೂ ಉಳ್ಳಾಲ ಠಾಣಾಧಿಕಾರಿಗಳು, ಸಂಚಾರಿ ಠಾಣಾಧಿಕಾರಿ, ಗ್ರಾಮಕರಣಿಕರು, ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳು, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Related Posts

Leave a Reply

Your email address will not be published.