“ದೇವತಾ”ಕಲಾ ಪ್ರದರ್ಶನ : ವಿದುಷಿ ಪ್ರವೀಣ ಮೋಹನ್ ಅವರಿಂದ ವಿಭಿನ್ನ ಕಲಾಕೃತಿಗಳ ಪ್ರದರ್ಶನ
ಉಡುಪಿಯ ಅದಿತಿ ಗ್ಯಾಲರಿ ವತಿಯಿಂದ “ದೇವತಾ” ವಿಭಿನ್ನ ಕಲಾ ಪ್ರದರ್ಶನ ಮೇ 26 ರಿಂದ 28 ರವರೆಗೆ ಪ್ರತೀದಿನ ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆ ತನಕ ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಅದಿತಿ ಗ್ಯಾಲರಿನಲ್ಲಿ ಪ್ರದರ್ಶನಗೊಳ್ಳಲಿದೆ. ಈ ಪ್ರದರ್ಶನದ ಉದ್ಘಾಟನಾ ಸಮಾರಂಭವು ಮೇ 25, 2023 ರಂದು ಸಂಜೆ 5:15 ಕ್ಕೆ ಅದಿತಿ ಗ್ಯಾಲರಿನಲ್ಲಿ ಜರುಗಲಿದೆ. ಈ ಸಮಾರಂಭದಲ್ಲಿ ಮೂಡುಬಿದರೆಯ ಆಳ್ವಾಸ್ ಫೌಂಡೇಶನ್ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ, ಉಜ್ವಲ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್ ಪಿ ಶೆಟ್ಟಿ, ಮಂಗಳೂರಿನ ಲ್ಯಾಮಿನ್ ಫ್ರೇಮ್ ಗ್ಯಾಲರಿ ಮಾಲಕರಾದ ಕೆ ನರೇಂದ್ರ ಶೆಣೈ ಆಗಮಿಸಲಿದ್ದಾರೆ.
ರೇಖಾಚಿತ್ರ, ಜಲವರ್ಣ, ಚಾರ್ಕೋಲ್, ಫ್ಯಾಬ್ರಿಕ್, ಪಾಟ್ ಪೇಂಟಿಂಗ್, ಚುಕ್ಕೆ ಚಿತ್ರ, ಅಕ್ರಿಲಿಕ್, ಲೋಹ ಉಬ್ಬುಶಿಲ್ಪ ಹೀಗೆ ಹಲವು ಮಾಧ್ಯಮಗಳಲ್ಲಿ ಪರಿಣತಿಯನ್ನು ಹೊಂದಿರುವ ಪ್ರಬುದ್ಧ ಭರತನಾಟ್ಯ ಕಲಾವಿದೆ, ಕಲಾ ಶಿಕ್ಷಕಿಯೂ ಆಗಿರುವ ವಿದುಷಿ ಪ್ರವೀಣ ಮೋಹನ್‌ರವರು ರಚಿಸಿರುವ ಸುಮಾರು 25 ಕಲಾಕೃತಿಗಳನ್ನು “ದೇವತಾ” ಕಲಾ ಪ್ರದರ್ಶನದಲ್ಲಿ ವೀಕ್ಷಣೆಗೆ ಇಡಲಾಗುತ್ತದೆ. ಅಪರೂಪವಾಗಿರುವ ಸಾಂಪ್ರದಾಯಿಕ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿದೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮೂಡಿ ಬಂದ ಹೊಸ ಆಲೋಚನೆಗೆ ರೂಪವನ್ನು ನೀಡಿ, ನಶಿಸುತ್ತಿರುವ ಸಾಂಪ್ರದಾಯಿಕ ಕಲಾಕೃತಿಗಳಿಗೆ ಒತ್ತನ್ನು ನೀಡುವ ಉದ್ದೇಶ ಈ ಕಲಾ ಪ್ರದರ್ಶನದ್ದಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ ಮೋಹನ್ ಹಾಗೂ ಅದಿತಿ ಗ್ಯಾಲೆರಿಯ ವ್ಯವಸ್ಥಾಪಕ ಟ್ರಸ್ಟಿಯಾಗಿರುವ ಡಾ. ಕಿರಣ್ ಆಚಾರ್ಯ ಉಪಸ್ಥಿತರಿದ್ದರು.