ಧರ್ಮಸ್ಥಳ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ

ಧರ್ಮಸ್ಥಳ ಪೊಲೀಸ್ ಠಾಣೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ದೇಶದಲ್ಲೇ ಅತ್ಯಂತ ಹೆಸರುವಾಸಿಯಾದ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರಕ್ಕೆ ಧರ್ಮದೇವತೆಗಳು ರಕ್ಷಕರಾದರೆ ಕ್ಷೇತ್ರಕ್ಕೆ ಬರುವ ಭಕ್ತರನ್ನು ರಕ್ಷಿಸಿ, ಅಧರ್ಮಕ್ಕೆ ಶಿಕ್ಷೆಯನ್ನು ವಿಧಿಸುವವರು ಪೊಲೀಸರು. ಧರ್ಮ ಸಂಸ್ಥಾಪನೆಗೆ ನಿರ್ಭಿತ ವಾತಾವರಣ ಸೃಷ್ಟಿಯಾದಲ್ಲಿ ಆ ದೇಶ ಸುಭಿಕ್ಷೆಯಾಗಿರುತ್ತದೆ ಎಂದು ಹೇಳಿದರು.

ಶಿಷ್ಟರ ರಕ್ಷಣೆ ಹಾಗೂ ದುಷ್ಟರ ಶಿಕ್ಷೆ ಪೊಲೀಸರ ನಿಷ್ಠೆಯ ಕರ್ತವ್ಯವು ಪವಿತ್ರ ಸೇವೆ ಆಗಿದೆ. 8 ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ಧರ್ಮಸ್ಥಳ ಸತ್ಯ, ಧರ್ಮ, ನ್ಯಾಯ ಮತ್ತು ನೀತಿ ನೆಲೆಯೂರಿದ ಪುಣ್ಯಕ್ಷೇತ್ರ ಎಂಬ ಪ್ರತೀತಿ ಪಡೆದುಕೊಂಡಿದೆ. ಮಾತು ಬಿಡ ಮಂಜುನಾಥ ಎಂಬ ಮಾತು ಎಲ್ಲರಿಗೂ ಚಿರಪರಿಚಿತ. ಪವಿತ್ರ ತೀರ್ಥಕ್ಷೇತ್ರಗಳಲ್ಲಿ ದೇವರು ಮತ್ತು ದೈವಗಳೇ ಧರ್ಮ ರಕ್ಷಕರು. ಆದರೂ ಕೆಲ ಮನುಷ್ಯರು ಮಾನಸಿಕವಾಗಿ ಸ್ವಾರ್ಥ, ಆಸೆ-ದುರಾಸೆ ಮತ್ತು ಲಾಲಸೆಯಿಂದ ಆಧರ್ಮ, ಅನ್ಯಾಯಕ್ಕೆ ಪ್ರೇರಿತರಾಗಿ ಪುಣ್ಯಕ್ಷೇತ್ರಗಳಲ್ಲಿಯೂ ಕಳ್ಳತನದಂತಹ ಅಪರಾಧಗಳನ್ನು ಮಾಡುತ್ತಾರೆ. ಆದರೆ, ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯಿಂದ ಕಲ್ಲನ್ನು ತೆಗೆದುಕೊಂಡು ಹೋದವರು ಮತ್ತೆ ತೊಂದರೆಯಾಗಿ ಅದನ್ನು ಮರಳಿಸಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಯ ಮೇಲಿನ ಭಕ್ತಿ ಮತ್ತು ಅಣ್ಣಪ್ಪ ಸ್ವಾಮಿಯ ಭಯದಿಂದ ಇಲ್ಲಿ ಸಾಮಾನ್ಯವಾಗಿ ದುಷ್ಕೃತ್ಯಗಳು ನಡೆಯುವುದಿಲ್ಲ. ಆದರೂ ಪೊಲೀಸರ ಭಯ ಮತ್ತು ಎಚ್ಚರಿಕೆಯಿಂದ ಸಮಾಜದ ಶುದ್ದೀಕರಣವಾಗಿ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಪೊಲೀಸರು ಮಾಡುವ ಸೇವೆಗೆ ಸದಾ ದೇವರ ಕೃಪೆ ಮತ್ತು ಅನುಗ್ರಹ ಇರುತ್ತದೆ. ಪೊಲೀಸರು ಶ್ರಮಜೀವಿಗಳಾಗಿದ್ದು ಅವರಿಗೆ ಸಮಸ್ಯೆ, ಸವಾಲುಗಳು ಎದುರಾದಾಗ ಸರಕಾರ ಕಾಯಕಲ್ಪ ಕೊಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ಪ್ರತಿಯೊಂದರಲ್ಲೂ ಅಚ್ಚುಕಟ್ಟು ಮೂಡಿಬರಲು ಧರ್ಮಾಧಿಕಾರಗಳೇ ಪ್ರೇರಣೆ.ಅವರು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ಧರ್ಮಸ್ಥಳ ಪೊಲೀಸ್ ಠಾಣೆಯ ನೂತನ ಕಟ್ಟಡದ ಬೇಡಿಕೆ ಇರಿಸಿದ್ದು ಉತ್ತಮ ವಿನ್ಯಾಸ ರಚಿಸಿದಾಗ ಹೆಗ್ಗಡೆಯವರು ಅದನ್ನು ಇಷ್ಟಪಟ್ಟಿದ್ದರು. ಅದರಂತೆ ಇದೀಗ ರಾಜ್ಯದಲ್ಲಿ ಮೊದಲ ಖಾಸಗಿ ವಿನ್ಯಾಸದ ಪೊಲೀಸ್ ಠಾಣೆಯಾಗಿ ಧರ್ಮಸ್ಥಳದ ಪೊಲೀಸ್ ಠಾಣೆ ಮೂಡಿ ಬಂದಿದೆ ಎಂದರು.

Related Posts

Leave a Reply

Your email address will not be published.