ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮತ್ತು ಬಹುಜನ ಪ್ರಗತಿಪರ ಸಂಘಟನೆ ಒಕ್ಕೂಟದಿಂದ ಪಿ .ಡೀಕಯ್ಯ ಅವರಿಗೆ ನುಡಿ ನಮನ

ಬೆಳ್ತಂಗಡಿ : ‘ಸ್ವಂತಕ್ಕಾಗಿ ಬದುಕದೆ ಸಮಾಜ ಹಿತಕ್ಕಾಗಿ ಬದುಕಿದವರು ಪಿ.ಡೀಕಯ್ಯರವರು. ಅವರು ಮನುಷ್ಯ ಮನುಷ್ಯರ ಮಧ್ಯೆ ಸಾಮರಸ್ಯದಿಂದ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟವರು. ನಿಜವಾದ ಅರ್ಥದಲ್ಲಿ ಪರಿವರ್ತನೆಯ ಹರಿಕಾರರಾಗಿದ್ದು, ಎಲ್ಲಾ ವರ್ಗದ ಜನ ಗೌರವಿಸುವ ವ್ಯಕ್ತಿತ್ವ ಅವರದಾಗಿತ್ತು’ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.
ಅವರು ಭಾನುವಾರ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಈಚೆಗೆ ನಿಧನರಾದ ಪಿ. ಪಿ.ಡೀಕಯ್ಯರಿಗೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮತ್ತು ಬಹುಜನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ಇದರ ವತಿಯಿಂದ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾಜಿ ಶಾಸಕ ಕೆ ವಸಂತ ಬಂಗೇರ ಮಾತನಾಡಿ, ‘ಪಿ.ಡೀಕಯ್ಯರು ಓರ್ವ ಮಹಾನ್ ಹೋರಾಟಗಾರ. ಅವರು ದಲಿತರ ಪರವಾಗಿ ಮಾತ್ರ ಹೋರಾಟ ಮಾಡದೆ, ಅಲ್ಪ ಸಂಖ್ಯಾತರು ಹಾಗೂ ಹಿಂದುಳಿದವರ ಪರವಾಗಿಯೂ ಹೋರಾಟ ಮಾಡಿದ್ದಾರೆ. ನನ್ನ ಮತ್ತು ಅವರ ಮಧ್ಯೆ 35 ವರ್ಷಗಳ ಆತ್ಮೀಯತೆ ಇದ್ದು, ಅವರ ಚಿಂತನೆ ಸಮಾಜದ ಹಿತವೇ ಆಗಿತ್ತು. ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಘದ ವತಿಯಿಂದ ನಡೆದ ನಾರಾಯಣ ಗುರು ಪಠ್ಯವನ್ನು 10 ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಸೇರಿಸಬೇಕು ಎಂಬ ಹೋರಾಟ ಅವರ ಬದುಕಿನ ಕಡೆಯ ಹೋರಾಟವಾಗಿದೆ ಮತ್ತು ಅದಕ್ಕೆ ಫಲವೂ ಸಿಕ್ಕಿದೆ’ ಎಂದರು.
ಅವರ ಪತ್ನಿ ಆತ್ರಾಡಿ ಅಮೃತ ಶೆಟ್ಟಿ ಮಾತನಾಡಿ, ‘ಡೀಕಯ್ಯರವರು ನನ್ನ ಸುತ್ತ ಭದ್ರವಾದ ಕೋಟೆಯನ್ನು ಕಟ್ಟಿ ಕೋಟೆಯ ಮಧ್ಯೆ ನನ್ನನ್ನು ಬಿಟ್ಟು ಹೋದರು. ಈ ಕೋಟೆ ನನ್ನನ್ನು ಕೊನೆವರೆಗೂ ಕಾಯುತ್ತೆ ಅಂತ ನಾನು ನಂಬಿದ್ದೇನೆ’ ಎಂದರು.ದಕ್ಷಿಣ ಕನ್ನಡ ಜಿಲ್ಲಾ ಸಮಾಜ ಪರಿವರ್ತನಾ ಮುಖಂಡ ಅಚ್ಚುತ ಸಂಪಿಗೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬಿಎಸ್ ಪಿ ರಾಜ್ಯ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್, ಉಪನ್ಯಾಸಕ ವಾಸುದೇವ ಬೆಳ್ಳೆ, ಬೆಂಗಳೂರು ಐಎಎಸ್ ಅಕಾಡೆಮಿಯ ಶಿವಕುಮಾರ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ರಾಜೀವ್ ಸಾಲಿಯಾನ್ ವೇದಿಕೆಯಲ್ಲಿ ಇದ್ದರು.
ಬಿಎಸ್ ಪಿ ಜಿಲ್ಲಾಧ್ಯಕ್ಷ ದಾಸಪ್ಪ ಎಡಪದವು, ಸಿಪಿಐ(ಎಂ) ಬೆಳ್ತಂಗಡಿ ಸಮಿತಿ ಕಾರ್ಯದರ್ಶಿ ಶಿವಕುಮಾರ್ ಎಸ್.ಎಂ., ಡಿ ವೈ ಎಪ್ ಐ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಬೆಳ್ತಂಗಡಿ ಆದಿ ದ್ರಾವಿಡ ಸಂಘದ ಅಧ್ಯಕ್ಷ ಶೇಖರ್ ಧರ್ಮಸ್ಥಳ, ಮುಖಂಡ ಅಮ್ಮು ಕುಮಾರ್, ದಲಿತ ಮುಖಂಡ ಚೆನ್ನಕೇಶವ, ಪ್ರಮುಖರಾದ ಚಂದು ಎಲ್, ಪ್ರಭಾಕರ ಶಾಂತಿಕೋಡಿ, ಹರಿಯಪ್ಪ ಮುತ್ತೂರು, ಶೈಲೇಶ್ ಕುಮಾರ್, ಶೇಖರ ಕುಕ್ಕೇಡಿ, ಜನಾರ್ದನ ಕೆಸರುಗದ್ದೆ, ನೇಮಿರಾಜ್ ಕೆ, ಪಿ.ಎಸ್.ಶ್ರೀನಿವಾಸ್, ಶೈಲೇಶ್ ಆರ್. ಜೆ, ಲಕ್ಷ್ಮಣ ಜಿ.ಎಸ್., ಶೇಖರ ಲಾಯಿಲ ವೆಂಕಣ್ಣ ಕೊಯ್ಯೂರು, ನಾದಮಣಿ ನಾಲ್ಕೂರು, ಪೇರೂರು ಜಾರು, ರಘು ಧರ್ಮಸೇನ, ಗೌರಿ, ಧಮ್ಮಾನಂದ ಬೆಳ್ತಂಗಡಿ ಮುಂತಾದವರು ಭಾಗವಹಿಸಿದ್ದರು. ಪಿ.ಡೀಕಯ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮೈಸೂರು ವಿಭಾಗ ಸಂಚಾಲಕ ಬಿ.ಕೆ. ವಸಂತ್ ಸ್ವಾಗತಿಸಿದರು. ಸತೀಶ್ ಕಕ್ಕೆಪದವು ಪ್ರಸ್ತಾವಿಸಿದರು. ರಾಜೀವ್ ಕಾರ್ಯಕ್ರಮ ನಿರೂಪಿಸಿದರು.