ನಾಪತ್ತೆಯಾದ ಮೀನುಗಾರನನ್ನು ಹುಡುಕುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ಖಂಡನೀಯ: ಶಾಸಕ ಗುರುರಾಜ್‌ ಗಂಟಿಹೊಳೆ

ಬೈಂದೂರು: ಇತ್ತೀಚಿಗೆ ಮೀನುಗಾರಿಕೆ ವೇಳೆ ನಾಪತ್ತೆಯಾಗಿರುವ ನಾರಾಯಣ ಮೋಗವೀರ ಅವರ ಕುಟುಂಬಕ್ಕೆ ಮೀನುಗಾರ ಸಂಕಷ್ಟ ಪರಿಹಾರ ನಿಧಿಯಡಿ ತಕ್ಷಣವೇ ಪರಿಹಾರ ಒದಗಿಸಬೇಕು ಹಾಗೂ ಅಧಿಕಾರಿಗಳು ಯಜಮಾನನನ್ನು ಕಳೆದುಕೊಂಡ ಆ ಕುಟುಂಬದ ನೋವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಗುರುರಾಜ್‌ ಗಂಟಿಹೊಳೆ ಆಕ್ರೋಶ ಹೊರ ಹಾಕಿದ್ದಾರೆ.
ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಕ್ಷೇತ್ರದ ಮೀನುಗಾರಿಕೆ ಹಾಗೂ ಬಂದರು ಯೋಜನೆಗಳ ಬಗೆಗಿನ ಚರ್ಚೆ ವೇಳೆ ಶಾಸಕ ಗುರುರಾಜ್‌ ಗಂಟಿಹೊಳೆ ಆಕ್ರೋಶ ಹೊರ ಹಾಕಿದ್ದಾರೆ.


ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಮೀನುಗಾರಿಕೆ ಇಲಾಖೆ ಅಧಿಕಾರಿ ಗಳೊಂದಿಗೆ ಕ್ಷೇತ್ರದ ಮೀನುಗಾರಿಕೆ ಯೋಜನೆಗಳು ಹಾಗೂ ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು, ಜನವರಿ 2 ರಂದು ಪರ್ಸಿನ್ ಬೋಟ್ ನಲ್ಲಿ ಮೀನುಗಾರಿಕೆ ವೇಳೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ನಾಪತ್ತೆ ಆಗಿರುವ ಬಡ ಮೀನುಗಾರರಾದ ನಾರಾಯಣ ಮೊಗವೀರ ಅವರ ಸುಳಿವು ಸಿಗದೇ ಇರುವುದು ಅತ್ಯಂತ ದುಃಖದಾಯಕ ಸಂಗತಿಯಾಗಿದೆ.
ನಾರಾಯಣ ಮೊಗವೀರರ ಮನೆಗೆ ತೆರಳಿ ಅವರ ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದೇನೆ. ನಾಪತ್ತೆಯಾಗಿರುವ ಅವರನ್ನು ಹುಡುಕಲು ಜಿಲ್ಲಾಡಳಿತಕ್ಕೆ ಹಾಗೂ ಸಂಬಂದಿಸಿದ ಇಲಾಖೆಗೆ ಈಗಾಗಲೇ ಮನವಿ ಮಾಡಲಾಗಿದೆ. ಆದರೂ ಈವರೆಗೂ ಮೀನುಗಾರರನ್ನು ಹುಡುಕಲು ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಸಾಧ್ಯವಾಗದೆ ಇರುವುದು ಹಾಗೂ ಈ ಬಗ್ಗೆ ಅಗತ್ಯ ಮುತುವರ್ಜಿ ವಹಿಸದೇ ಇರುವುದು ಖಂಡನೀಯ. ಬಡ ಮೀನುಗಾರರ ನೋವಿಗೆ ಸ್ಪಂದಿಸದ ಜಿಲ್ಲಾಡಳಿತ ಈ ಬಗ್ಗೆ ದಿವ್ಯ ನಿರ್ಲಕ್ಷ ತೋರಿದೆ ಎಂದರು.
ಮೀನುಗಾರರ ಸಂಕಷ್ಟ ಸಮಯದಲ್ಲಿಯೇ ಬಳಕೆ ಯಾಗುವ ಸಂಕಷ್ಟ ಪರಿಹಾರ ನಿಧಿಯಡಿ 10 ಲಕ್ಷ ತುರ್ತು ಪರಿಹಾರ ನೀಡಲು ಜನವರಿ 10 ರಂದು ಆದೇಶ ಪತ್ರ ಆಗಿ 7 ದಿನ ಕಳೆಯುತ್ತಾ ಬಂದರೂ ಈವರೆಗೂ ನೊಂದವರ ಮನೆ ಬಾಗಿಲಿಗೆ ತೆರಳಿ ಚೆಕ್ ವಿತರಿಸುವ ಹಾಗೂ ನಿಮ್ಮ ಸಂಕಷ್ಟದಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ಹೇಳಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಹಾಗಾಗಿ ಇನ್ನೆರಡು ದಿನದಲ್ಲಿ ಪರಿಹಾರ ಮೊತ್ತದ ಚೆಕ್ ನ್ನು ಮೀನುಗಾರರ ಕುಟುಂಬಕ್ಕೆ ನೀಡಬೇಕು . ಆ ಮೂಲಕ ಮನೆಯ ಯಜಮಾನನನ್ನು ಕಳೆದು ಕೊಂಡು ನೋವಿನಲ್ಲಿರುವ ಕುಟುಂಬಕ್ಕೆ ಜಿಲ್ಲಾಡಳಿತ ಹಾಗೂ ಸರಕಾರ ನೆರವು ನೀಡಬೇಕು. ಇದು ಆಗದೇ ಇದ್ದಲ್ಲಿ ಪ್ರತಿಭಟಿಸಿಯಾದರೂ ಆ ಕುಟುಂಬಕ್ಕೆ ನ್ಯಾಯ ಒದಗಿಸಲು ಸಿದ್ದನಿದ್ದೇನೆ ಎಂದು ಎಚ್ಚರಿಕೆ ನೀಡಿದರು.

Related Posts

Leave a Reply

Your email address will not be published.