ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ವಿರುದ್ಧ ಕಿಡ್ನ್ಯಾಪ್ ಪ್ರಕರಣ ದಾಖಲು

ತನ್ನ ಅಳಿಯನನ್ನೇ ಅಪಹರಣ ಮಾಡಿ ಆಸ್ಪತ್ರೆಗೆ ದಾಖಲಿಸಿ ಮಾನಸಿಕ ಅಸ್ವಸ್ಥ ಎಂದು ಬಿಂಬಿಸಿದ ಆರೋಪದ ಮೇಲೆ ಪುತ್ತೂರು ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಹಾಗೂ ಅವರ ಕುಟುಂಬದ ಐವರ ವಿರುದ್ಧ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿವ್ಯಪ್ರಭಾ ಅವರ ವಿರುದ್ದ ಅವರ ಅಳಿಯ ನವೀನ್ ಗೌಡ ಅವರು ದೂರು ನೀಡಿದ್ದು, ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ದಿವ್ಯಪ್ರಭಾ ಹಾಗೂ ಮಗಳು ಸ್ಪಂದನಾ , ಪರಶುರಾಮ್ , ಸ್ಪರ್ಶಿತಾ , ಮಹದೇವ ಗೌಡ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ನವೀನ್ ಗೌಡ ಅವರು ತನ್ನ ಪಕ್ಕದ ಊರಿನ ದಿವ್ಯಪ್ರಭಾ ಅವರ ಪುತ್ರಿ ಸ್ಪಂದನಾ ಅವರನ್ನು 2019 ರ ಫೆ.8 ರಂದು ವಿವಾಹವಾಗಿದ್ದರು. 2022 ರ ಅಕ್ಟೋಬರ್ ನಿಂದ ನವೀನ್ ಮತ್ತು ಸ್ಪಂದನಾ ನಡುವೆ ಮನಸ್ತಾಪ ಉಂಟಾಗಿತ್ತು. ಈ ಬಗ್ಗೆ ಎರಡೂ ಕುಟುಂಬಗಳ ನಡುವೆ ರಾಜೀ ಮಾತುಕತೆ ನಡೆದಿತ್ತು ಆದರೆ ಅದು ಯಶಸ್ವಿಯಾಗದ ಕಾರಣ ಪತ್ನಿ ಸ್ಪಂದನಾ ಅವರಿಂದ ದೂರವಾಗಿದ್ದೆ ಎಂದು ನವೀನ್ ಗೌಡ ದೂರಿನಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ದಿವ್ಯಪ್ರಭಾ ಹಾಗೂ ಅವರ ಸಂಬಂಧಿಗಳು ಸಂಚು ರೂಪಿಸಿ ಕಳೆದ ಡಿಸೆಂಬರ್ 19 ರಂದು ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿ ಬಲವಂತವಾಗಿ ಕೈ ಕಾಲು ಕಟ್ಟಿ ಹಾಕಿ ಅಂಬುಲೆನ್ಸ್ ನಲ್ಲಿ ಬೆಂಗಳೂರಿನ ಜೆ.ಪಿ.ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಆಸ್ಪತ್ರೆಯ ವೈದ್ಯರ ಜತೆಗೆ ಒಳ ಸಂಚು ನಡೆಸಿ ನನ್ನನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸಿ ಅಕ್ರಮ ಬಂಧನದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದರು. ಇದಕ್ಕೆ ಒಪ್ಪದಿದ್ದಾಗ ಇದಕ್ಕೆ ಆರೋಪಿಗಳು ಆಸ್ಪತ್ರೆಯಲ್ಲಿಯೇ ನನಗೆ ಹಲ್ಲೆ ನಡೆಸಿ ಚಿಕಿತ್ಸೆಗೆ ಸಮ್ಮತಿ ನೀಡಿರುವುದಾಗಿ ಬಿಂಬಿಸಿದ್ದರು. ಬಳಿಕ ಕೆಲವು ಕಾಗದ ಪತ್ರಗಳಿಗೆ ಬಲವಂತವಾಗಿ ಸಹಿ ಹಾಕುವಂತೆ ಒತ್ತಾಯ ಮಾಡಿದ್ದರು. ತಾನು ಯಾವುದೇ ಕಾಗದ ಪತ್ರಗಳಿಗೆ ಸಹಿ ಮಾಡದ ಕಾರಣ ಆರೋಪಿಗಳೇ ನನ್ನ ನಕಲಿ ಸಹಿ ಬಳಸಿ ದಸ್ತಾವೇಜು ಸೃಷ್ಟಿಮಾಡಿದ್ದಾರೆ ಎಂದು ನವೀನ್ ಗೌಡ ದೂರಿನಲ್ಲಿ ತಿಳಿಸಿದ್ದಾರೆ. ಅಪಹರಣದ ಸಂಬಂಧ ದಾಖಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಸಂಬಂಧ ಹೈಕೋರ್ಟ್ ನಿರ್ದೇಶನದ ಬಳಿಕ ಕಳೆದ ಡಿಸೆಂಬರ್ 22 ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದೇನೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನವೀನ್ ಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ನವೀನ್ ಗೌಡ ಅವರ ದೂರಿನ ಆಧಾರದ ಮೇಲೆ ದಿವ್ಯಪ್ರಭಾ ಹಾಗೂ ಇತರ ಮೇಲೆ ಎಫ್.ಐ.ಆರ್ ದಾಖಲಾಗಿದೆ.

Related Posts

Leave a Reply

Your email address will not be published.