ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶ ಜೆಟ್ಟಿ ಭಾಗ ಕುಸಿತ

ಆರಂಭದಿಂದಲೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಒಂದಿಲ್ಲೊಂದು ಕಾರಣಗಳಿಂದಾಗಿ ಸುದ್ದಿಯಾಗುತ್ತಲೇ ಇದ್ದ ಕುಂದಾಪುರದ ಗಂಗೊಳ್ಳಿ ಬಂದರು ಪ್ರದೇಶ ಇದೀಗ ಮತ್ತೆ ಸುದ್ದಿಯಲ್ಲಿದೆ. ಗಂಗೊಳ್ಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ನಡೆಯುತ್ತಿರುವ ಜೆಟ್ಟಿ ನಿರ್ಮಾಣ ಕಾರ್ಯದ ವೇಳೆ ಜೆಟ್ಟಿ ಭಾಗ ಕುಸಿತಕ್ಕೊಳಗಾಗಿದೆ. 150 ಮೀಟರಿಗೂ ಅಧಿಕ ಜೆಟ್ಟಿ ಕುಸಿದಿದ್ದು, ಸ್ಥಳೀಯ ಮೀನುಗಾರರು ಆತಂಕಕ್ಕೀಡಾಗಿದ್ದಾರೆ. ಸಂಜೆ 5.30 ರ ಹೊತ್ತಿಗೆ ಘಟನೆ ನಡೆದಿದ್ದು, ನಿರಂತರವಾಗಿ ಕುಸಿತವಾಗುತ್ತಿದ್ದರೂ ಸಹಇಲ್ಲಿಯವರೆಗೂ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಯಾರು ಇತ್ತ ಕಡೆ ತಲೆ ಹಾಕಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಕಳೆದ 13 ವರ್ಷದ ಹಿಂದೆ ಗಂಗೊಳ್ಳಿ ಜೆಟ್ಟಿ ನಿರ್ಮಾಣವಾಗಿದ್ದು ಇದು ಕೂಡ ಕುಸಿತಕ್ಕೊಳಗಾಗಿತ್ತು. ಬಳಿಕ ಶಿವಮೊಗ್ಗ ಸಂಸದ ಹಾಗೂ ಬೈಂದೂರು ಶಾಸಕರ ಮುತುವರ್ಜಿಯಲ್ಲಿ 12 ಕೋಟಿ ಅನುದಾನದಲ್ಲಿ ನೂತನ ಜೆಟ್ಟಿ ಕಾಮಗಾರಿಗೆ ಮಂಜೂರಾಗಿ 180 ಮೀಟರ್ ಕೆಲಸವೂ ನಡೆದಿತ್ತು. ಮುಂದಿನ ಕಾಮಗಾರಿಗಾಗಿ ಹಳೆ ಜೆಟ್ಟಿಯ ಡಯಪ್ರಮ್ ಹಾಲ್ ನಡುವೆಯಿದ್ದ ರಾಡ್ ತುಂಡರಿಸಿ ಹೊಸ ಪಿಲ್ಲರ್ ಹಾಕಿದ್ದು ಎರಡಕ್ಕೂ ಕೊಂಡಿಯಾಗಿದ್ದ ರಾಡು ತುಂಡರಿಸಿ ಅವೈಜ್ಞಾನಿಕ ಕಾಮಗಾರಿ ಮಾಡಿದ್ದರಿಂದ ಹಳೆ ಜೆಟ್ಟಿ ಕುಸಿತಕ್ಕೊಳಗಾಗಿ ಈಗ ನಡೆಯುತ್ತಿರುವ ಕಾಮಗಾರಿಗಾಗಿ ಮಾಡಿದ ಪಿಲ್ಲರ್ ಮೇಲೆ ಬಿದ್ದು ಹಲವು ಪಿಲ್ಲರ್ ಕುಸಿದಿದೆ.ಈ ಸಮಸ್ಯೆಗೆ ಶೀಘ್ರ ಪರಿಹಾರವೊದಗಿಸಿ ಮೀನುಗಾರರು ಬದುಕು ಕಟ್ಟಿಕೊಳ್ಳಲು ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟ ನಿಶ್ಚಿತ ಎಂದು ಗಂಗೊಳ್ಳಿಯ ಹಸಿ ಮೀನು ವ್ಯಾಪಾರಸ್ಥರ ಸಂಘದವರು ಎಚ್ಚರಿಕೆ ನೀಡಿದ್ದಾರೆ.
