ಗಟ್ಟಿ ಸಮಾಜದ ನಾಯ್ಗರು ಮತ್ತು ಮೇಲ್ಡರಿಗೆ ಗಡಿ ಪ್ರಸಾದ ಪ್ರಧಾನ
ಮಂಗಳೂರು : ಗಟ್ಟಿ ಸಮಾಜದ ನಾಯ್ಗರು ಮತ್ತು ಮೇಲ್ಡರಿಗೆ ಗಡಿ ಪ್ರಸಾದ ಪ್ರಧಾನ ಕಾರ್ಯಕ್ರಮವು ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ಸೋಮವಾದಂದು ಲಕ್ಷದೀಪೋತ್ಸವದ ಸಂದರ್ಭದಲ್ಲಿ ಗಟ್ಟಿ ಸಮಾಜದ ಹಾಗೂ ಊರವರ ಉಪಸ್ಥಿತಿಯಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಪ್ರಸ್ತುತ ಗಟ್ಟಿ ಸಮಾಜದ ನಾಯ್ಗರಾಗಿ ಕಾರ್ಯನಿರ್ವಹಿಸುತ್ತಿರುವ ಹರೀಶ್ಚಂದ್ರ ಗಟ್ಟಿ ಬೊಂಬಾಯಿಮನೆ ಹಾಗೂ ಮೇಲ್ಡರಾಗಿ ಕಾರ್ಯನಿರ್ವಹಿಸುತ್ತಿರುವ ಯಾದವ ಗಟ್ಟಿ ಪಿಲಾರ್ ಅವರಿಗೆ ಗಡಿ ಪ್ರಸಾದವನ್ನು ಪ್ರಧಾನ ಮಾಡಲಾಯಿತು.
ಗಟ್ಟಿ ಸಮಾಜದಲ್ಲಿ ಪ್ರಸ್ತುತ ನಾಯ್ಗರಾಗಿ ಕಾರ್ಯನಿರ್ವಹಿಸುತ್ತಿರುವ ಹರಿಶ್ಚಂದ್ರ ಗಟ್ಟಿ ಬೊಂಬಾಯಿಮನೆ ಹಾಗೂ ಯಾದವ ಗಟ್ಟಿ ಪಿಲಾರು ಇವರು ಗಟ್ಟಿ ಸಮಾಜವನ್ನು ಶ್ರೀ ಸೋಮೇಶ್ವರ ಸೋಮನಾಥ ದೇವರ ಕಾರ್ಯಕ್ರಮಗಳಲ್ಲಿ ಮತ್ತು ಕುಟುಂಬದ ಹಾಗೂ ಸಮಾಜದ ಇತರ ದೇವತಾ ಕಾರ್ಯಗಳಲ್ಲಿ ಮತ್ತು ಮಂಗಳ ಕಾರ್ಯಗಳಲ್ಲಿ ಸಂಪ್ರದಾಯದಂತೆ ಪ್ರತಿನಿಧಿಸುವ ನಾಯ್ಗರ ಸ್ಥಾನ ಹಾಗೂ ಮೇಲ್ಡರ ಸ್ಥಾನದ ಗಡಿ ಸ್ವೀಕರಿಸಲು ಅಧಿಕೃತವಾಗಿ ಪ್ರಸಾದವನ್ನು ಕ್ಷೇತ್ರ ತಂತ್ರಿಗಳಾದ ಉಚ್ಚಿಲತ್ತಾಯ ನಿಲೇಶ್ವರ ತಂತ್ರಿಗಳ ಉಪಸ್ಥಿತಿಯಲ್ಲಿ ಸ್ವೀಕರಿಸಿದರು.
ಶ್ರೀ ಸೋಮನಾಥ ದೇವಸ್ಥಾನದ ಲಕ್ಷ ದೀಪೋತ್ಸವದ ದೇವರ ಬಲಿ ಸೇವೆಯ ಬಳಿಕ ಧ್ವಜಸ್ತಂಭದ ಎದುರುಗಡೆ ಗಡಿ ಪ್ರಸಾಧ ಪ್ರಧಾನದ ವಿಧಿವಿಧಾನಗಳು ನಡೆದವು . ದೇವಸ್ಥಾನದ ಹಾಗೂ ಸಮಾಜದ ಸೇವೆಯನ್ನು ಕಾಯ ವಾಚ ಮನಸ್ಸ ನಿಷ್ಢೆಯಿಂದ ಮಾಡುತ್ತೇವೆ ಎಂಬ ಸಂಕಲ್ಪದೊಂದಿಗೆ ನಾಯ್ಗರು ಹಾಗೂ ಮೇಲ್ಡರು ಗಡಿ ಪ್ರಸಾದ ಸ್ವೀಕರಿಸಿದರು.
ಗಟ್ಟಿ ಸಮಾಜದ ಹೊಸದಾಗಿ ನೇಮಗೊಂಡ ನಾಯ್ಗರು ಹಾಗೂ ಮೇಲ್ಡರುಗಳಿಗೆ ಗಡಿ ಪ್ರಸಾದ ಪ್ರಧಾನ ಸಮಾರಂಭವು ಲಕ್ಷದೀಪೋತ್ಸವದಂದು ನಡೆಯುವುದು ಹಿಂದಿನಿಂದಲೂ ನಡೆಕೊಂಡು ಬಂದಿರುವ ಕಟ್ಟುಕಟ್ಟಲೆಯಾಗಿದೆ. ಕರ್ನಾಟಕ ವ್ಯಾಪ್ತಿಯ ಒಂಭತ್ತು ಮಾಗಣೆಯ ಗಟ್ಟಿ ಸಮುದಾಯವು ನಾಯ್ಗರು ಹಾಗೂ ಮೇಲ್ಡರ ಉಪಸ್ಥಿತಿಯಲ್ಲಿ ತಮ್ಮ ಸಮಾಜದ ಮಂಗಳ ಕಾರ್ಯಗಳನ್ನು ನಡೆಸುತ್ತಾರೆ. ಶೀ ಸೋಮನಾಥನನ್ನು ತಮ್ಮ ಕುಲಸ್ವಾಮಿ ಎಂದು ಆರಾಧಿಸುವ ಗಟ್ಟಿ ಸಮುದಾಯಕ್ಕೆ ಸೋಮನಾಥ ದೇವಸ್ಥಾನದ ಜಾತ್ರೆ ,ಉತ್ಸವ ಕಾರ್ಯಕ್ರಮಗಳಲ್ಲಿ ಗಟ್ಟಿ ಸಮಾಜದ ಪ್ರತಿನಿಧಿಗಳಾಗಿ ನಾಯ್ಗರು ಹಾಗೂ ಮೇಲ್ಡರು ಅಗ್ರಪಂಕ್ತಿಯಲ್ಲಿ ನಿಲ್ಲುವ ಸ್ಥಾನಮಾನವನ್ನು ಪಡೆದಿದ್ದು, ಅರ್ಚಕ ವರ್ಗದ ಬಳಿಕದ ಪ್ರಥಮ ಪ್ರಸಾದವನ್ನು ಸ್ವೀಕರಿಸುವ ಗೌರವ ಕೂಡ ನಾಯ್ಗರು ಹಾಗೂ ಮೇಲ್ಡರಿಗೆ ಸಂದಾಯವಾಗುತ್ತದೆ.