ಹಿರಿಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ (68 ವರ್ಷ) ನಿಧನ

ಕನ್ನಡ ರಂಗಭೂಮಿಯ ಖ್ಯಾತ ಹಿರಿಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ (68 ವರ್ಷ) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಇಂದು ಹಾವೇರಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಗೋಪಾಲಕೃಷ್ಣ ನಾಯರಿಯವರು ಸನ್ಮಾನಗೊಳ್ಳಬೇಕಾಗಿತ್ತು. ಆದರೆ ವಿಧಿವಶರಾಗಿದ್ದಾರೆ.
ಉಡುಪಿಯ ಸಾಲಿಗ್ರಾಮದ ಕಾರ್ಕಡ ನಿವಾಸಿಯಾಗಿರುವ ಗೋಪಾಲಕೃಷ್ಣ ನಾಯರಿಯವರು ಅನಾರೋಗ್ಯದಿಂದ ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅಪಾರ ಶಿಷ್ಯವರ್ಗವನ್ನೂ ಅಗಲಿದ್ದಾರೆ.
ಗೋಪಾಲಕೃಷ್ಣ ನಾಯರಿಯವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಮೂಲಕ ಖ್ಯಾತರಾಗಿದ್ದರು. ರಾಷ್ಟ್ರೀಯ ಪ್ರಸಿದ್ಧಿಯ ಪ್ರಯೋಗಶೀಲ ರಂಗ ನಿರ್ದೇಶಕರಾಗಿದ್ದರು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ. ಅಪಾರ ರಂಗಭೂಮಿ ಮತ್ತು ಯಕ್ಷಗಾನ ಕಲಾವಿದರ ಒಡನಾಟ ಹೊಂದಿದ್ದರು.
ರಂಗಭೂಮಿಯ ಅಪಾರ ಸಂಖ್ಯೆಯ ಅಭಿಮಾನಿಗಳು ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.