ದೇಶವನ್ನು ಅಭ್ಯುದಯದ ಪಥದಲ್ಲಿ ಮುನ್ನಡೆಸಲು ಯುವ ಸಮೂಹದಿಂದ ಸಾಧ್ಯ: ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್

ಧಾರವಾಡ, ಜ, 16; ಭಾರತ ಯುವ ಸಮೂಹದ ದೇಶವಾಗಿದ್ದು, ಯುವ ಜನಾಂಗವೇ ಭಾರತದ ಭವಿಷ್ಯ. ದೇಶವನ್ನು ಅಭ್ಯುದಯದ ಪಥದಲ್ಲಿ ಕೊಂಡೊಯ್ದು, ಉಜ್ವಲಗೊಳಿಸುವ ಸಾಮರ್ಥ್ಯ ಯುವ ಜನರ ಕೈಯಲ್ಲಿದೆ ಎಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ 26 ನೇ ರಾಷ್ಟ್ರೀಯ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯುವ ಜನಾಂಗ ಉತ್ತಮವಾಗಿ ಕೆಲಸ ಮಾಡಿದರೆ ಭಾರತ ಇನ್ನಷ್ಟು ಉತ್ತಮ ಸ್ಥಾನಕ್ಕೆ ತಲುಪಲಿದೆ. ಮುಂದಿನ 25 ವರ್ಷ ಅಮೃತ ಕಾಲವಾಗಿದ್ದು, ಕರ್ತವ್ಯ ಕಾಲದ ಮೂಲಕ ಬೆಳವಣಿಗೆ ಸಾಧಿಸಬೇಕು. ಅಮೃತ ಕಾಲ ನಿಶ್ಚಿತ ರೂಪದಲ್ಲಿ ಮನುಷ್ಯ ಜೀವನ ಸರ್ವಶ್ರೇಷ್ಟ ಅವಧಿಯಾಗಿದೆ ಎಂದರು.
ಯುವ ಜನೋತ್ಸವ ಅತ್ಯುತ್ತಮ ಕಾರ್ಯಕ್ರಮವಾಗಿದ್ದು. ಉತ್ಸಾಹ ಮತ್ತು ಹುರುಪಿನಿಂದ ಭಾರತದ ವಿವಿಧ ಸಂಸ್ಕೃತಿ, ದಿವ್ಯತೆ, ಭವ್ಯತೆಯನ್ನು ಅನಾರಣವಗೊಳಿಸಲಾಗಿದೆ. ಇಂತಹ ಉತ್ಸವಗಳಿಂದ ಶಸಕ್ತ ಭಾರತ ನಿರ್ಮಾಣ ಮಾಡಲು ಸಾಧ್ಯ. ಪ್ರಾಚೀನ ಕಾಲದಿಂದಲೂ ಭಾರತ ವಸುದೈಕುಟುಂಬಕಂ, ಸರ್ವೇ ಜನೋ ಸುಖಿನೋ ಭವಂತು ಎಂಬ ತತ್ವದ ತಳಹದಿ ಮೇಲೆ ನಿಂತಿದೆ. ಇದರಲ್ಲಿ ವಿಶ್ವಶಾಂತಿಯ ಸಂದೇಶವಿದೆ ಎಂದರು.

ಗೌರವಾನ್ವಿತ ಪ್ರಧಾನಮಂತ್ರಿ ಅವರು ಶ್ರೇಷ್ಠ, ಸ್ವಾವಲಂಬಿ ಭಾರತ ನಿರ್ಮಿಸಲು ಮುಂದಾಗಿದ್ದಾರೆ, ಶಿಕ್ಷಣದಲ್ಲಿ ನೈತಿಕ ಮೌಲ್ಯ ಮೂಡಿಸಲು ಮುಂದಾಗಿದ್ದು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಈ ಆಶಯಗಳನ್ನು ಸಫಲಗೊಳಿಸಲಿದೆ. ನವ ಭಾರತ ನಿರ್ಮಿಸಲು ಈ ನೀತಿ ಭೂಮಿಕೆಯಾಗಲಿದೆ. ಶಿಕ್ಷಣ ನೀತಿಯಿಂದ ಎಲ್ಲರಿಗೂ ಉತ್ತಮ ಶಿಕ್ಷಣ ದೊರೆಯಲಿದ್ದು, ಕರ್ನಾಟಕ ಎನ್.ಇ.ಪಿ ಜಾರಿಗೊಳಿಸಿದ ಮೊದಲ ರಾಜ್ಯವಾಗಿದೆ. ಕ್ರೀಡೆ, ಯೋಗವನ್ನು ಪಠ್ಯಕ್ರಮದ ಭಾಗ ಮಾಡಿದ್ದು,. ಇದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಯೋಗಥಾನ್ ನಲ್ಲಿ ಗಿನ್ನೇಸ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿರುವುದು ಉತ್ತಮ ಬೆಳವಣಿಗೆ. ದೇಶದ ಮೂಲೆ ಮೂಲೆಗಳಿಂದ ಆಗಮಿಸಿರುವ ಯುವಜನ ಇಲ್ಲಿಂದ ಸಿಹಿ ನೆನಪುಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು ಎಂದರು.
ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಮಾತನಾಡಿ, ಜನವರಿ 15 ರಂದು ನಡೆದ ಯೋಗಥಾನ್‌ನಲ್ಲಿ ಇದುವರೆಗೆ ನಡೆದ ಎಲ್ಲಾ ಯೋಗಾಥಾನ್ ಕಾರ್ಯಕ್ರಮಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಇದು ಗಿನ್ನೆಸ್ ದಾಖಲೆಗೆ ಪಾತ್ರವಾಗಿದ್ದು, ಬೆಳಗಾವಿ, ಮೈಸೂರಿನಲ್ಲಿ ಹೆಚ್ವು ಜನ ಯೋಗಥಾನ್ ನಲ್ಲಿ ಭಾಗವಹಿಸಿದ್ದರು ಎಂದರು.

ಜಮ್ಮು – ಕಾಶ್ಮೀರದ ಲಡಾಕ್ ನಿಂದ ಆಗಮಿಸಿದ್ದ ಮಾಸೂಮ್ ಮಾತನಾಡಿ, ಇಲ್ಲಿಗೆ ಬರುವ ಮುನ್ನ ನಮಗೆ ಆತಂಕ ಇತ್ತು. ನಂತರ ಎಲ್ಲವೂ ಮಂಜಿನಂತೆ ಕರಗಿಹೋಯಿತು. ಯೋಗನಾಥ್ ನಲ್ಲಿ ಗಿನ್ನೇಸ್ ದಾಖಲೆ ನಿರ್ಮಿಸಿದ ಕಾರ್ಯಕ್ರಮದಲ್ಲಿ ನಾವೆಲ್ಲಾ ಭಾಗವಹಿಸಿದ್ದು ಸಂತಸ ತಂದಿದೆ. ಲಡಾಕ್ ನಲ್ಲಿ ಯೋಗ ಕಲಿಸಲು ಪ್ರಯತ್ನಿಸುತ್ತೇನೆ. ಪರಿಸರ ರಕ್ಷಣೆಗೆ ಒತ್ತು ನೀಡುತ್ತೇನೆ ಎಂದರು.
ಸಿಕ್ಕಿಂ ನ ಭೀಮ್ ಸುಭಾ ಮಾತನಾಡಿ, ವಿವಿಧ ರಾಜ್ಯಗಳ ವಿಭಿನ್ನ ಭೋಜನ ಸವಿದು ಭಾರತ ಮಾತೆಯ ನೆನಪು ಮಾಡಿಕೊಂಡೆ, ಧಾರವಾಡದ ಫೇಡ, ದಕ್ಷಿಣ ಭಾರತದ ಇಡ್ಲಿ ದೋಸೆ ತುಂಬಾ ಇಷ್ಟವಾಯಿತು. ಇಲ್ಲಿಗೆ ಬಂದ ನಂತರ ಅಖಂಡ ಭಾರತ ನಿರ್ಮಾಣಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧ ಎಂದರು.
