ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕನ್ನಡಿಗ ಗುರುರಾಜ ಪೂಜಾರಿಗೆ ಕಂಚು

ಇಂಗ್ಲೆಂಡ್‍ನ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಗೇಮ್ಸ್-2022 ಕ್ರೀಡಾಕೂಟದಲ್ಲಿ ಕುಂದಾಪುರದ ವೇಟ್‍ಲಿಫ್ಟರ್ ಗುರುರಾಜ್ ಪೂಜಾರಿ ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿದ್ದು, ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಪುರುಷರ 61 ಕೆ.ಜಿ. ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ 269 ಕೆಜಿ ಭಾರ ಎತ್ತುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಎರಡನೇ ಬಾರಿ ಭಾರತಕ್ಕೆ ಪದಕ ಗೆದ್ದು ಕೊಟ್ಟಿದ್ದಾರೆ. ಈ ಮೊದಲು 2018 ರಲ್ಲಿ ಗೋಲ್ಡ್ ಕೋಸ್ಟ್‍ನಲ್ಲಿ ನಡೆದ ಪುರುಷರ 56 ಕೆಜಿ ವಿಭಾಗದಲ್ಲಿ ಗುರುರಾಜ್ ಪೂಜಾರಿ ಬೆಳ್ಳಿ ಜಯಿಸಿದ್ದರು.

ವಂಡ್ಸೆ ಮೂಲದ ಚಿತ್ತೂರಿನ ಚಾಲಕರಾಗಿರುವ ಮಹಾಬಲ ಪೂಜಾರಿ ಹಾಗೂ ಪದ್ದು ಪೂಜಾರಿ ದಂಪತಿಗಳ ಪುತ್ರನಾಗಿರುವ ಗುರುರಾಜ್ ಪ್ರಸ್ತುತ ಭಾರತೀಯ ವಾಯುಸೇನೆಯ ಉದ್ಯೋಗಿಯಾಗಿದ್ದಾರೆ. ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದ ಚಿತ್ತೂರು ನಿವಾಸಿಯಾಗಿರುವ ಗುರುರಾಜ್ ತೀವ್ರ ಬಡತನದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟುವಾಗಿ ಬೆಳೆಯುವಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಕೊಲ್ಲೂರಿನ ಮೂಕಾಂಬಿಕಾ ದೇವಳ ಪ್ರೌಢ ಶಾಲೆ ಹಾಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕುಸ್ತಿಯಲ್ಲಿ ಆಸಕ್ತಿ ತೋರಿದ ಗುರುರಾಜ್‍ಗೆ ಸುಕೇಶ್ ಶೆಟ್ಟಿಯವರು ತರಬೇತಿ ನೀಡಿದ್ದರು. ಬಳಿಕ ಉನ್ನತ ವ್ಯಾಸಂಗಕ್ಕಾಗಿ ಉಜಿರೆಯ ಎಸ್‍ಡಿಎಂ ಕಾಲೇಜನ್ನು ಆಯ್ದುಕೊಂಡ ಬಳಿಕ ಗುರುರಾಜ್ ಬದುಕಿನ ತಿರುವೇ ಬದಲಾಯಿತು. ಅಲ್ಲಿನ ಕೋಚ್ ರಾಜೇಂದ್ರ ಪ್ರಸಾದ್ ಅವರು ವೇಟ್ ಲಿಫ್ಟಿಂಗ್‍ನಲ್ಲಿ ಮುಂದುವರೆಯುವಂತೆ ಪ್ರೋತ್ಸಾಹ ನೀಡಿದ್ದು, ನಿರಂತರವಾಗಿ ತರಬೇತಿ ಪಡೆದು ಅಲ್ಲಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಲೇ ಬಂದರು.

2017ರ ಆಸ್ಟ್ರೇಲಿಯಾದಲ್ಲಿ ದಕ್ಷಿಣ ಏಷ್ಯಾ ಗೇಮ್ಸ್‍ಗಳಲ್ಲಿ ಚಿನ್ನ ಗೆದ್ದಿದ್ದು, ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಚಿನ್ನ, ಬೆಳ್ಳಿ ಪಡೆದುಕೊಂಡಿದ್ದಾರೆ. 2018ರಲ್ಲಿ ಗೋಲ್ಡ್ ಕೋಸ್ಟ್‍ನಲ್ಲಿ ನಡೆದ ಪುರುಷರ 56 ಕೆಜಿ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದಾರೆ. ಇವರ ಈ ಎಲ್ಲಾ ಸಾಧನೆ ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ 2018ರಲ್ಲಿ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.

10 ದಿನದ ಹಿಂದೆ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದರಿಂದ ಪದಕ ಗೆಲ್ಲುವ ನಿರೀಕ್ಷೆ ಇರಲಿಲ್ಲ. ಆದರೂ ನಾನು ಪ್ರಯತ್ನ ಮಾತ್ರ ಕೈ ಬಿಡಲಿಲ್ಲ. ಕನ್ನಡದ ಜನತೆ, ಕುಂದಾಪುರದವರಿಗೆ ಮೊತ್ತಮೊದಲಿಗೆ ಧನ್ಯವಾದಗಳು. ಕೇಂದ್ರ ಕ್ರೀಡಾ ಇಲಾಖೆ, ವೇಟ್‍ಲಿಫ್ಟಿಂಗ್ ಫೆಡರೇಶನ್, ವಾಯುಸೇನೆ, ರಾಜ್ಯ ಸರಕಾರ, ಅಪ್ಪ- ಅಮ್ಮ, ಪತ್ನಿ, ಅಣ್ಣಂದಿರು, ಮನೆಯವರೆಲ್ಲರಿಗೂ ನನ್ನ ವಂದನೆಗಳು. ನಿಮ್ಮೆಲ್ಲರ ಹಾರೈಕೆ ಫಲಿಸಿದೆ. ಪತ್ನಿ ಸೌಜನ್ಯಗೆ ಈ ಪದಕ ಅರ್ಪಿಸುತ್ತೇನೆ ಎಂದು ಪದಕ ವಿಜೇತ ಗುರುರಾಜ್ ಪೂಜಾರಿ ಹೇಳಿದ್ದಾರೆ.

ಕಂಚಿನ ಪದಕ ವಿಜೇತ ಗುರುರಾಜ್ ಪೂಜಾರಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣ ಗೌಡ ಟ್ವಿಟರ್‍ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

Related Posts

Leave a Reply

Your email address will not be published.