ಹಾರಾಡಿ-ರೈಲ್ವೇ ನಿಲ್ದಾಣ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ

ಪುತ್ತೂರು:ಸುಮಾರು 40 ವರ್ಷಗಳ ಜನತೆಯ ಬೇಡಿಕೆಯಾದ ನಗರದ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆಯನ್ನು ಕಾಂಕ್ರಿಟೀಕರಣ ಮಾಡುವ ಮೂಲಕ ಅಭಿವೃದ್ಧಿಪಡಿಸುವ ಕಾರ್ಯ ಪುತ್ತೂರು ನಗರಸಭೆ ವತಿಯಿಂದ ನಡೆದಿದ್ದು, ಡಬಲ್ ಇಂಜಿನ್ ಸರಕಾರ ಇಂತಹಾ ಅಭಿವೃದ್ಧಿ ಕೆಲಸವನ್ನು ಮಾಡುವ ಮೂಲಕ ದೇಶದಲ್ಲಿ ಪರಿವರ್ತನೆ ಯುಗ ಉಂಟು ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ನಗರದ ಹಾರಾಡಿ-ರೈಲ್ವೇ ನಿಲ್ದಾಣ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಯ ಶಿಲಾನ್ಯಾಸಕ್ಕೆ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿ, ಶಿಲಾ ನಾಮಫಲಕ ಅನಾವರಣಗೊಳಿಸಿ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದರು.

ಶಾಸಕ ಸಂಜೀವ ಮಠಂದೂರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 1070 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಡಬಲ್ ಇಂಜಿನ್ ಸರಕಾರದಿಂದ ಮಾತ್ರ ಅಭಿವೃದ್ಧಿ ಕಾಮಗಾರಿ ಆಗುತ್ತಿದೆ. ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 130 ಕೋಟಿ ಜಲಸಿರಿ ಯೋಜನೆ, 25 ಕೋಟಿ ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆ ಅಭಿವೃದ್ಧಿ, 33 ಕೋಟಿ ನಗರೋತ್ಥಾನ ಯೋಜನೆ, 70 ಕೋಟಿ ಜೆಜೆಎಂ ಯೋಜನೆಯ ಕಾಮಗಾರಿಗಳು ನಡೆಯುತ್ತಿದೆ ಎಂದರು.

ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್,ಮುಖ್ಯ ಅತಿಥಿಗಳಾಗಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ,ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ಬಿಜೆಪಿ ನಗರ ಮಂಡಲ ಅಧ್ಯಕ್ಷ, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಮೀನುಗಾರಿಕಾ ಇಲಾಖೆಯ ಎ.ವಿ.ತೀರ್ಥರಾಮ, ನಗರಸಭೆ ಸದಸ್ಯ ಪದ್ಮನಾಭ ನಾಯ್ಕ ಪಾಲ್ಗೊಂಡಿದ್ದರು

Related Posts

Leave a Reply

Your email address will not be published.