ದ.ಕ.ಇಂದು ಶಾಲೆಗಳಿಗೆ ರಜೆ

ದ.ಕ.ಜಿಲ್ಲೆಯಾದ್ಯಂತ ಇಂದು ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ನೆರೆ ನೀರು ನಿಂತು ಜಲಾವೃತಗೊಂಡಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿ ಮತ್ತು ಮುಲ್ಕಿ, ಉಳ್ಳಾಲ, ಬಂಟ್ವಾಳ, ಮೂಡುಬಿದಿರೆ ವ್ಯಾಪ್ತಿಯಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ನಗರದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಸಹಿತ ನಗರದ ಬಹುತೇಕ ಕಡೆಗಳಲ್ಲಿ ನೀರು ನಿಂತಿದ್ದು, ಪಾದಚಾರಿ, ವಾಹನಿಗರು ಸಂಕಷ್ಟಪಡುವಂತಾಗಿದೆ. ನಗರದ ಪಾಂಡೇಶ್ವರ ಸಮೀಪ ಶಿವನಗರ ಸುತ್ತಮುತ್ತಲಿನ ಹಲವು ಮನೆಗಳು ಜಲಾವೃತಗೊಂಡಿವೆ.
ಮನೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲಾಗದೆ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮುಂಜಾನೆಯಿಂದಲೇ ಗುಡುಗು ಸಹಿತ ಮಳೆಯಾಗಿದೆ. ಕೆಲವು ಕಡೆ ಮರ ಉರುಳಿ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ನಗರದ ಪಂಪ್‍ವೆಲ್, ಕರಂಗಲ್ಪಾಡಿಯಲ್ಲೂ ಕೃತಕ ನೆರೆಯಾಗಿದೆ.