ಹೆಜಮಾಡಿ : ಗುದ್ದಲಿ ಪೂಜೆ ನಡೆದು ಏಳು ತಿಂಗಳಾದರೂ ದುರಸ್ಥಿಯಾಗದ ರಸ್ತೆ
ಹೆಜಮಾಡಿ ಗುಂಡಿ ರಸ್ತೆ ದುರಸ್ತಿಗಾಗಿ ಕಳೆದ ಏಳು ತಿಂಗಳ ಹಿಂದೆ ಶಾಸಕರು ಗುದ್ದಲಿ ಪೂಜೆ ನಡೆಸಿದ್ದರಾದರೂ, ಈ ವರೆಗೂ ದುರಸ್ತಿ ಕಾಣದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವ ಎಚ್ಚರಿಕೆ ನೀಡಿದ್ದಾರೆ.
ಗ್ರಾಮಸ್ಥ ಯೋಗೀಶ್ ಶೆಣೈ ಮಾತನಾಡಿ, ನಮ್ಮ ಬಲು ಬೇಡಿಕೆಯ ಗುಂಡಿ ರಸ್ತೆ ದುರಸ್ತಿಗಾಗಿ ಅದೆಷ್ಟೋ ಮನವಿಗಳ ಬಳಿಕ ಕಳೆದ ಏಳು ತಿಂಗಳ ಹಿಂದೆ ಗುದ್ದಲಿ ಪೂಜೆ ನಡೆಸಲಾಗಿದ್ದು, ಗುದ್ದಲಿ ಪೂಜೆ ನಡೆದು ಎರಡು ತಿಂಗಳ ಬಳಿಕ ಕಾಂಕ್ರೀಟೀ ಕರಣ ನಡೆಸಲು ಜಲ್ಲಿ ಹಾಗೂ ಸಿಮೆಂಟ್ ತಂದು ಹಾಕಲಾಯಿತು. ಆದರೆ ಕೆಲವೇ ದಿನಗಳಲ್ಲಿ ತಂದು ಹಾಕಲಾದ ಜಲ್ಲಿಕಲ್ಲು, ಸಿಮೆಂಟ್ ಸ್ಥಳದಿಂದ ಮಾಯ, ಕೇಳಿದರೆ ಬೇರೆಕಡೆ ಕಾಮಗಾರಿ ನಡೆಯುತ್ತಿದೆ ಎಂಬ ಉತ್ತರ, ಇದೀಗ ಗುದ್ದಲಿ ಪೂಜೆ ನಡೆದು ಏಳು ತಿಂಗಳು ಕಳೆದರೂ ಕಾಮಗಾರಿ ನಡೆಸದಿರುವುದರಿಂದ ಈ ರಸ್ತೆಯಲ್ಲಿ ನಡೆದಾಡಲು ಅಸಾಧ್ಯ ಎಂಬಂತ್ತಾಗಿದೆ.
ಈ ಬಗ್ಗೆ ಬಹಳಷ್ಟು ಬಾರಿ ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಸುಮಾರು 65 ಮನೆಗಳು ಈ ಭಾಗದಲ್ಲಿದೆ.. ದಿನವೊಂದಕ್ಕೆ ವಾಹನಗಳು ಸಹಿತ ನೂರಾರು ಮಂದಿ ಪಾದಚಾರಿಗಳು ಈ ರಸ್ತೆಯನ್ನೇ ಬಳಸಿ ಮನೆ ಸೇರ ಬೇಕಾಗಿದ್ದರೂ ಜನಪ್ರತಿನಿಧಿಗಳಿಗೆ ನಮ್ಮ ಕಷ್ಟ ಅರ್ಥವಾಗುತ್ತಿಲ್ಲ, ಶೀಘ್ರವಾಗಿ ರಸ್ತೆ ಕಾಮಗಾರಿ ನಡೆಸಿದರೆ ಒಕೆ…ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದೇವೆ ಎಂಬುದಾಗಿ ಎಚ್ಚರಿಸಿದ್ದಾರೆ. ಈ ಸಂದರ್ಭ ಗ್ರಾಮಸ್ಥರಾದ ಶ್ರೀಕಾಂತ್ ಶೆಣೈ, ಕೇಶವ ಕೋಟ್ಯಾನ್, ದೀಪಕ್ ಕೋಟ್ಯಾನ್ ಕೇಶವ ಹೆಜಮಾಡಿ ಮುಂತಾದವರಿದ್ದರು.