ಮಸಣ ಸೇರಿದ್ದು ಅಭಿನಂದನೆಯ ಫ್ಲೆಕ್ಸಲ್ಲ ಬಿಜೆಪಿಯ ರಾಜಕಾರಣ. ಮುನೀರ್ ಕಾಟಿಪಳ್ಳ

ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ಧದ ಹೋರಾಟ ಯಶಸ್ವಿಯ ಹಂತಕ್ಕೆ ತಲುಪಿದೆ. ದ.ಕ ಜಿಲ್ಲಾಧಿಕಾರಿ ಡಿಸೆಂಬರ್ ಒಂದರಿಂದ ಟೋಲ್ ಸಂಗ್ರಹ ಸ್ಥಗಿತಕ್ಕೆ ಲಿಖಿತ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಪಕ್ಷ ಮಾತ್ರ ತನ್ನದೇ ಸಾಧನೆಯಂತೆ ಬಿಂಬಿಸಲು ಹೊರಟು ಮುಜುಗರಗೊಳಗಾಗಿ ಇನ್ನು ಈಗಾಗಲೇ ತಯಾರಿಸಿದ ಅಭಿನಂದನೆಯ ಬ್ಯಾನರ್, ಫ್ಲೆಕ್ಸ್ ಗಳನ್ನು ಅಳವಡಿಸಲು ಸಾಧ್ಯವಾಗದೆ ಅವುಗಳೆಲ್ಲಾ ಸುರತ್ಕಲ್ ಸ್ಮಶಾನದ ಮೂಲೆ ಸೇರಿದೆ. ನಿಜವಾಗಿ ಸ್ಮಶಾನ ಸೇರಿದ್ದು ಅಭಿನಂದನೆಯ ಪ್ಲೆಕ್ಸ್ ಗಳಲ್ಲ ಅದು ಬಿಜೆಪಿ ಪಕ್ಷದ ಅತ್ಯಂತ ಕೆಟ್ಟ, ನಿರ್ಲಜ್ಜ, ಜನವಿರೋಧಿ ರಾಜಕಾರಣ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಮುನೀರ್ ಕಾಟಿಪಳ್ಳ ಇಂದು 33ನೇ ದಿನದ ಹಗಲು ರಾತ್ರಿ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.

ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ಧದ ಹೋರಾಟವು ಐತಿಹಾಸಿಕ ಗೆಲುವನ್ನು ಸಾಧಿಸಿದೆ. ಈ ಹೋರಾಟದ ಜೊತೆಯಾಗಿ ನಿಂತ ದ.ಕ ಮತ್ತು ಉಡುಪಿ ಜಿಲ್ಲೆಯ ಜನಕ್ಕೂ ಹೋರಾಟದಿಂದ ಏನನ್ನೂ ಸಾಧಿಸಬಹುದೆಂಬ ಒಂದು ಹೊಸ ಭರವಸೆಯನ್ನು ತುಂಬಲು ಸಾಧ್ಯವಾಗಿದೆ. ತುಳುನಾಡಿನ ಮಣ್ಣಿನ ನಿಜವಾದ ಬೇಡಿಕೆ ಶಿಕ್ಷಣ, ಉದ್ಯೋಗ, ಆರೋಗ್ಯದಂತಹ ಪ್ರಶ್ನೆಗಳು. ಶಿಕ್ಷಣ, ಆರೋಗ್ಯದಂತಹ ವ್ಯಾಪಾರಿಕರಣದ ವಿರುದ್ಧವೂ ಜಿಲ್ಲೆಯ ಜನ ಮುಂದಿನ ದಿನಗಳಲ್ಲಿ ಹೋರಾಟವನ್ನು ಕೈಗೊಳ್ಳಲು ಸಾಧ್ಯವಾಗಬೇಕು. ಈಗಾಗಲೇ ಸುರತ್ಕಲ್ ಟೋಲ್ ಗೇಟ್ ರದ್ದುಗೊಂಡಿರುವ ಹಿಂದೆಯೇ ಹೆಜಮಾಡಿ ಟೋಲ್ ಗೇಟ್ ನಲ್ಲಿ ಹೆಚ್ಚುವರಿ ಸುಂಕ ವಸೂಲಿ ಮಾಡಲು ಮುಂದಾಗುವುದರ ವಿರುದ್ಧ ಆಕ್ರೋಶಗಳು ಆ ಭಾಗದಲ್ಲೂ ದಾಖಲಾಗುತ್ತಿದ್ದೆ. ಹೆಜಮಾಡಿಯಲ್ಲೂ ಕೋಮುವಾದಿ, ನಿರ್ಲಜ್ಜ, ಫರ್ಸಂಟೇಜ್ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳನ್ನು ಎಳೆಎಳೆಯಾಗಿ ವಿವರಿಸಲಿದ್ದೇವೆ. ಡಿಸೆಂಬರ್ ಎರಡರಂದು ಹೆಜಮಾಡಿ ಟೋಲ್ ಗೇಟ್ ಮುಂಭಾಗ ನಡೆಯುವ ಧರಣಿಯಲ್ಲೂ ನಾವುಗಳು ಭಾಗವಹಿಸುವ ಮೂಲಕ ಅಲ್ಲಿನ ಹೋರಾಟಕ್ಕೆ ಸಹಮತವನ್ನು ವ್ಯಕ್ತಪಡಿಸಬೇಕಾಗಿದೆ ಎಂದರು.

ಮಾಜಿ ಶಾಸಕ ಮೊಯಿದ್ದಿನ್ ಬಾವಾ, ಸಿಐಟಿಯು ಕಾರ್ಮಿಕ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಬೀಡಿ ಕಾರ್ಮಿಕ ಮುಖಂಡರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಪದ್ಮಾವತಿ ಶೆಟ್ಟಿ, ಬಾಬು ಪಿಲಾರ್, ಸದಾಶಿವ ದಾಸ್, ಹೋರಾಟ ಸಮಿತಿ ಮುಖಂಡರಾದ ರಾಘವೇಂದ್ರ ರಾವ್ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.

ಮಾಜಿ ಮೇಯರ್ ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್ ಕುಂಜತ್ತಬೈಲ್, ಮಾಜಿ ಮೇಯರ್ ಬಶೀರ್ ಬೈಕಂಪಾಡಿ, ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮೂಸಬ್ಬ ಪಕ್ಷಿಕೆರೆ, ಮಾಜಿ ಕಾರ್ಪೊರೇಟರ್ ಜಯಂತಿ ಬಿ ಶೆಟ್ಟಿ, ಕಾಂಗ್ರೇಸ್ ಮುಖಂಡರಾದ ಸಾಹುಲ್ ಹಮೀದ್ , ಪಾರಡೈಸ್ ಯೂತ್ ಕ್ಲಭ್ ನ ಅಬೂಬಕ್ಕರ್, ಉಸ್ಮಾನ್, ಝಾಕಿರ್, ಡಿವೈಎಫ್ಐ ಮುಖಂಡರಾದ ಮಾಧುರಿ ಬೋಳಾರ, ಪ್ರಮೀಳಾ ಶಕ್ತಿನಗರ, ವಿಲ್ಲಿ ವಿಲ್ಸನ್ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.