ಕೊರೆಯುವ ಚಳಿಯಲ್ಲಿ ದೇಶದ ವೀರ ಯೋಧರ ನಿತ್ಯದ ಬದುಕು

ಬಂಟ್ವಾಳ: ಚಳಿಗಾಲದಲ್ಲಿ ತಣ್ಣೀರ ಸ್ನಾನ ಮಾಡಲು ನಾವು ಹಿಂದೆಟ್ಟು ಹಾಕುತ್ತೇವೆ. ಅಂತಹುದರಲ್ಲಿ ಮೈ ಕೊರೆಯುವ ಚಳಿ, ಮೈನಸ್ 18 ಡಿಗ್ರೆ ಸೆಲ್ಸಿಯಸ್ ವಾತವರಣವಿರುವ ಅರುಣಾಚಲ ಪ್ರದೇಶದ ಕೊರೆಯುವ ಚಳಿಯಲ್ಲಿ ಗಡಿ ಕಾಯುವ ನಮ್ಮ ದೇಶದ ವೀರಯೋಧರ ನಿತ್ಯದ ಬದುಕು ಹೇಗಿರಬಹುದು? ಇದಕ್ಕೊಂದು ತಾಜಾ ಉದಾಹರಣೆ ಈ ವಿಡಿಯೋವೊಂದು ಇಲ್ಲಿದೆ. ಭಾರತ ಚೀನಾ ಗಡಿಭಾಗವಾಗಿರುವ ಅರುಣಚಲಪ್ರದೇಶದ ಎತ್ತರದ ಪರ್ವತ ಭಾಗದಲ್ಲಿ ನಮ್ಮ ವೀರ ಯೋಧರು ಗಡಿಕಾಯುತ್ತಿದ್ದಾರೆ.

ಕೊರೆಯುವ ಚಳಿಗೆ ಗುಡ್ಡದ ಮೇಲಿಂದ ಹರಿಯುವ ನದಿಗಳು ಮಂಜುಗಡ್ಡೆಯಾಗಿ ಜಾರುವ ಗಾಜಿನಂತೆ ಭಾಸವಾಗುತ್ತಿದೆ. ಅಂತಹ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಮಂಜುಗಡ್ಡೆಯನ್ನು ಅಗೆದು ಕ್ಯಾನ್ ಗಳಲ್ಲಿ ತುಂಬಿಸುವ ದೃಶ್ಯ ಮನಕರಗಿಸುವಂತಿದೆ. ಈ ನೀರನ್ನು ಸಂಗ್ರಹಿಸಲು ಸುಮಾರು 5 ಕಿ. ಮೀ ದೂರ ಬೆಟ್ಟ ಗುಡ್ಡಗಳಲ್ಲಿ ನಡೆಯ ಬೇಕಾಗಿದೆ. ದೇಶವನ್ನು ಕಾಯುವ ವೀರಯೋಧರ ರೋಚಕ ಬದುಕಿಗೆ ಈ ವಿಡಿಯೋ ಪುಷ್ಠಿ ನೀಡುವಂತಿದೆ. ಮೂಲತಃ ಬಂಟ್ವಾಳ ತಾಲೂಕಿನ ಅಮ್ಟಾಡಿ ನಿವಾಸಿ ಭೂ ಸೇನೆಯ ಯೋಧ, ಜೆಸಿಐ ಬಂಟ್ವಾಳದ ಸದಸ್ಯ ಸುಧಾಕರ್ ಶೆಟ್ಟಿ ಅವರು ಅರುಣಾಚಲ ಪ್ರದೇಶದಿಂದ ಕಳುಹಿಸಿದ ವಿಡಿಯೋ ತುಣುಕು ಇದಾಗಿದೆ.