ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್‌ಶಿಪ್: ಫೈನಲ್‌ನಲ್ಲಿ ತಮಿಳುನಾಡು ಸರ್ಫರ್‌ಗಳ ಹಣಾಹಣಿ
ಸುರತ್ಕಲ್‌ನ ಸಸಿಹಿತ್ಲು ಬೀಚ್‌ನಲ್ಲಿ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್‌ಶಿಪ್ ನಡೆಯುತ್ತಿದ್ದು, ಇಂದು ಫೈನಲ್‌ನಲ್ಲಿ ಸ್ಪರ್ಧಿಗಳು ಸೆಣೆಸಾಡಲಿದ್ದಾರೆ.
ನಗರದ ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಷನ್ ಸಹಯೋಗದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಎರಡನೇ ದಿನವೂ ತಮಿಳುನಾಡು ಸರ್ಫರ್‌ಗಳು ಪಾರಮ್ಯ ಮೆರೆದರು. ಮಂತ್ರ ಸರ್ಫ್ ಕ್ಲಬ್‌ನ ರಾಜು ಪೂಜಾರ್, ಪ್ರದೀಪ್ ಪೂಜಾರ್ ಮತ್ತು ಆಕಾಶ್ ಪೂಜಾರ್ ಬಾಲಕರ ವಿಭಾಗದ ಫೈನಲ್‌ನಲ್ಲಿ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಗೋವಾದ ಸುಗರ್ ಬನಾರಸಿ, ತಮಿಳುನಾಡಿನ ನೇಹಾ ವೈದ್ ಮತ್ತು ಮರೀಲಿ ವುಂಡೆರಿಂಕ್ ಫೈನಲ್ ಪ್ರವೇಶಿಸಿದರು.
ಪುರುಷರ ವಿಭಾಗದಲ್ಲಿ ಮೊದಲ ದಿನ ಅತ್ಯಧಿಕ ಸ್ಕೋರ್ ಗಳಿಸಿದ ಕ್ರೀಡಾಪಟು ಎನಿಸಿಕೊಂಡಿದ್ದ ತಮಿಳುನಾಡು ಸರ್ಫರ್, ಅಗ್ರ ಶ್ರೇಯಾಂಕದ ಶಿವರಾಜ್ ಬಾಬು ಎರಡನೇ ದಿನವೂ ಗರಿಷ್ಠ ಸ್ಕೋರ್ ಗಳಿಸಿ ಗಮನ ಸೆಳೆದರು. ಬೆಳಿಗ್ಗೆ ನಡೆದ ಪುರುಷರ ಮುಕ್ತ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ೧೫.೧೭ ಸ್ಕೋರ್‌ನೊಂದಿಗೆ ಅವರು ಈ ಸಾಧನೆ ಮಾಡಿದರು. ಆದರೆ ಸೆಮಿಫೈನಲ್‌ನಲ್ಲಿ ಅವರಿಗೆ ನಿರಾಸೆ ಕಾಡಿತು. ಸೆಮಿಫೈನಲ್‌ನ ಎರಡನೇ ಹೀಟ್ಸ್‌ನಲ್ಲಿ ಸ್ಪರ್ಧಿಸಿದ ಅವರಿಗೆ ೮.೬೦ ಸ್ಕೋರು ಗಳಿಸಲಷ್ಟೇ ಸಾಧ್ಯವಾಯಿತು. ೯.೯೦ ಸ್ಕೋರುಗಳೊಂದಿಗೆ ಶ್ರೀಕಾಂತ್ ಡಿ ಮತ್ತು ೯.೭೦ ಸ್ಕೋರು ಗಳಿಸಿದ ಅಜೀಶ್ ಅಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು. ಒಂದನೇ ಹೀಟ್ಸ್‌ನಲ್ಲಿ ಸ್ಪರ್ಧಿಸಿದ್ದ ಸಂಜಯ್ ಕುಮಾರ್ ಎಸ್ ಮತ್ತು ಸಂಜಯ್ ಸೆಲ್ವಮಣಿ ಫೈನಲ್‌ಗೆ ಪ್ರವೇಶಿಸಿದರು.
ಕಳೆದ ಬಾರಿ ಮಹಿಳೆಯರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ತಮಿಳುನಾಡಿನ ಕಮಲಿ ಮೂರ್ತಿ ಮೋಹಕ ಪ್ರದರ್ಶನದೊಂದಿಗೆ ಮಹಿಳೆಯರ ವಿಭಾಗದ ಫೈನಲ್ ಪ್ರವೇಶಿಸಿದರು. ಮೊದಲ ಸೆಮಿಫೈನಲ್ ಹೀಟ್‌ನಲ್ಲಿ ೧೧.೨೩ ಸ್ಕೋರು ಕಲೆ ಹಾಕಿದ ಅವರೊಂದಿಗೆ ಗೋವಾದ ಸುಗರ್ ಬನಾರಸಿ ಕೂಡ ಫೈನಲ್ ತಲುಪಿದರು. ಭರವಸೆ ಮೂಡಿಸಿದ್ದ ಸ್ಥಳೀಯ ಪ್ರತಿಭೆ ಸಿಂಚನಾ ಗೌಡ ಅವರಿಗೆ ೪.೯೭ ಸ್ಕೋರು ಗಳಿಸಲಷ್ಟೇ ಸಾಧ್ಯವಾಯಿತು. ಎರಡನೇ ಸೆಮಿಫೈನಲ್ ಹೀಟ್‌ನಲ್ಲಿದ್ದ ತಮಿಳುನಾಡಿನ ನೇಹಾ ವೈದ್ ಮತ್ತು ಮರೀಲಿ ವುಂಡೆರಿಕ್ ಅಂತಿಮ ಘಟ್ಟಕ್ಕೆ ಅರ್ಹತೆ ಪಡೆದರು.
ತಮಿಳುನಾಡಿನ ಸಂಜಯ್ ಕುಮಾರ್ ಎಸ್, ಶ್ರೀಕಾಂತ್, ಸಂಜಯ್ ಸೆಲ್ವಮಣಿ ಮತ್ತು ಅಜೀಶ್ ಅಲಿ ಅವರು ಸರ್ಫಿಂಗ್ ಚಾಂಪಿಯನ್‌ಷಿಪ್‌ನ ಪುರುಷರ ಮುಕ್ತ ವಿಭಾಗದ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.