ಊರಿನ ಚಿತ್ರಣ ಬದಲಿಸುವ ಸೇತುವೆಗಳು….
ನದಿಗೆ ಅಡ್ಡಲಾಗಿ ಕಟ್ಟುವ ಸೇತುವೆಯೊಂದು ಹೇಗೆ ಊರೊಂದರ ಚಿತ್ರಣವನ್ನೇ ಬದಲಿಸುತ್ತದೆನ್ನುವುದನ್ನು ನಮಗೆ ಅನೇಕ ಬಾರಿ ಊಹಿಸಲೂ ಸಾಧ್ಯವಾಗುವುದಿಲ್ಲ.ಆ ಬದಲಾವಣೆಯಲ್ಲಿ ನಾವೂ ಬದಲಾಗಿ ಬಿಡುತ್ತೇವೆ. ಇಂತಹ ಬದಲಾವಣೆಗಳಾಗುತ್ತವೆ ಎಂದು ತಿಳಿದು ನಾವು ಥ್ರಿಲ್ ಆಗುತ್ತೇವೆ. ಆದರೆ ಬದಲಾವಣೆಗಳು ಘಟಿಸಿ ಊರಿನ ಚಿತ್ರಣ ಬದಲಾದ ಬಳಿಕ ನಮ್ಮೂರು ಹೀಗಿತ್ತು ಎನ್ನುವುದನ್ನು ನಾವು ಬಲು ಬೇಗ ಮರೆತುಬಿಡುತ್ತೇವೆ.ಹಿಂದಿನ ಚಿತ್ರಣಗಳು ಕಾಲಗರ್ಭದಲ್ಲಿ ಅಡಗುತ್ತಿದ್ದಂತೆಯೇ ನಮ್ಮ ಮನಸ್ಸಿಗೂ ಮರೆವು ಆವರಿಸುವುದುಂಟು.. ಮತ್ತೆ ಪ್ರಜ್ಞಾಪೂರ್ವಕ ಯೋಚಿಸದ ಹೊರತು ಅವು ನಮ್ಮ ಕಣ್ಮುಂದೆ ಬರುವುದೂ ಇಲ್ಲ.
ಈ ಪೀಠಿಕೆ ಏಕೆಂದರೆ ಇಂದು ನಮ್ಮ ನೇತ್ರಾವತಿಗೆ ಅಡ್ಡಲಾಗಿ ಹರೇಕಳದಿಂದ ಅತ್ತ ಕಡೆ ಅಡ್ಯಾರಿಗೆ ಸಂಪರ್ಕಿಸುವ ಸೇತುವೆಯ ಕಾಮಗಾರಿ ವೀಕ್ಷಿಸಲು ತೆರಳಿದ್ದೆ.ವರ್ಷದ ಹಿಂದಿದ್ದ ಹರೇಕಳ ಕಡವಿನ ಬಳಿಯ ಚಿತ್ರಣ ಸಂಪೂರ್ಣವಾಗಿ ಬದಲಾಗಿ ಬಿಟ್ಟಿದೆ. ಅಲ್ಲಿ ಹಿಂದೆ ಒಂದು ಪುಟ್ಟ ಸೇತುವೆಯಿತ್ತು. ಆ ಸೇತುವೆ ನದಿ ದಾಟಲೆಂದಿದ್ದದ್ದಲ್ಲ. ಅದು ದೋಣಿಯಲ್ಲಿ ನದಿಯ ಇನ್ನೊಂದು ಕಡೆಗೆ ತೆರಳುವವರು ದೋಣಿಗಾಗಿ ಕಾಯಲು ನಿರ್ಮಿಸಿದ್ದ ತಂಗುದಾಣ. ಈಗ ಅದು ಎಕ್ಸಾಕ್ಟ್ ಆಗಿ ಎಲ್ಲಿತ್ತು ಎನ್ನುವುದೇ ಮರೆತು ಬಿಡುವಷ್ಟು ಹೊಸ ಬೃಹತ್ ಸೇತುವೆ ಅಲ್ಲಿನ ಚಿತ್ರಣ ಬದಲಿಸಿದೆ. ಈಗ ಅಲ್ಲಿನ ಪ್ಯಾಸೆಂಜರ್ ಬೋಟುಗಳು ಮಾಯವಾಗಿ ಬಿಟ್ಟಿವೆ. ತುಟಿಗಳೆಡೆಗೆ ಬೀಡಿ ಸಿಕ್ಕಿಸಿ ಮ್ಯಾನುವಲ್ ದೋಣಿಗೆ ಹುಟ್ಟು ಹಾಕುತ್ತಿದ್ದ ಕಾಕ ಒಬ್ಬರು ನದಿ ದಂಡೆಯಲ್ಲಿ ಕೂತು ಬಾಯಿಂದ ಬುಸು ಬುಸು ಹೊಗೆ ಬಿಡುತ್ತಿದ್ದರು. ಅವರನ್ನು ಸೂಕ್ಷ್ಮವಾಗಿ ಗಮನಿಸಿದೆ. ಊರವರಿಗೆಲ್ಲಾ ಆಗಿರುವ ಖುಷಿ ಅವರ ಮುಖದಲ್ಲಿ ಕಾಣ ಸಿಗಲಿಲ್ಲ.ಬಹುಷ ನಿರುದ್ಯೋಗಿಯಾಗಿರುವ ನೋವು ಅವರನ್ನು ಕಾಡುತ್ತಿರಲೂಬಹುದು. ಈ ಸೇತುವೆ ಬರುತ್ತದೆಂದು ಸುದ್ಧಿ ಸಿಕ್ಕಿದಾಗ ಊರವರೆಲ್ಲಾ ಥ್ರಿಲ್ ಆಗಿದ್ದರು.ನಮಗಿನ್ನು ಮಾಯಾನಗರಿ ಮಂಗಳೂರು ಕೂಗಳತೆಯ ದೂರ ಎಂದು ಅಲ್ಲಿನ ಜನ ಹೇಳಿದ್ದನ್ನೂ ಕೇಳಿರುವೆ.ಹಿಂದೆಲ್ಲಾ ಒಂದು ಕಾಲು ಗಂಟೆ ಬಸ್ಸಲ್ಲಿ ಕೂತು ಕೂತೇ ದಣಿಯುತ್ತಿದ್ದ ಮಂದಿ ಇನ್ನೂ ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಸೇತುವೆಯ ಮೇಲೆ ಎರಡು ಕಿಲೋ ಮೀಟರ್ ನಡೆದು ಅಡ್ಯಾರ್ ಕಟ್ಟೆಯಲ್ಲಿ ಬಸ್ಸೇರಿ ಕೂತು ಇಪ್ಪತ್ತು ನಿಮಿಷದೊಳಗಾಗಿ ಮಾಯಾ ನಗರಿ ಮಂಗಳೂರು ತಲುಪುತ್ತಾರೆ.ಹಿಂದೆಲ್ಲಾ ಹರೇಕಳಕ್ಕೆ ಗಂಟೆಗೊಂದರಂತೆ ಬರುವ ಬಸ್ಸಿಗೆ ಕಾದು ಕುಳಿತುಕೊಳ್ಳಬೇಕಿತ್ತು.ಈಗ ಅಡ್ಯಾರ್ ಕಟ್ಟೆಗೆ ನಡೆದರೆ ಐದು ನಿಮಿಷಕ್ಕೊಂದರಂತೆ ಬಸ್ಸುಗಳು ಸಿಗುತ್ತವೆ.
ಇದೇ ಹರೇಕಳದಿಂದ ಹಿಂದೆಯೂ ಅಡ್ಯಾರ್ ಕಟ್ಟೆಗೆ ದೋಣಿಯಲ್ಲಿ ಹೋಗಿ ಅಲ್ಲಿ ಬಸ್ಸು ಹಿಡಿದು ಜನ ಮಂಗಳೂರು ತಲುಪುತ್ತಿದ್ದರು.ಮಳೆಗಾಲದಲ್ಲಿ ದೋಣಿಗಳು ಸಂಚರಿಸುವುದೂ ವಿರಳವಿತ್ತು.ಯಾಕೆಂದರೆ ಬಿರುಗಾಳಿಗೆ ದೋಣಿ ಓಲಾಡುತ್ತಿತ್ತು. ಪ್ರವಾಹವೂ ಸರ್ವೇ ಸಾಮಾನ್ಯವಾಗಿತ್ತು.ಈಗ ಅಂತಹ ಸವಾಲುಗಳೇ ಇಲ್ಲ. ಇಂತಹ ಬದಲಾವಣೆಗಳು ಹಿಂದೆಯೂ ನಮ್ಮ ಮಂಗಳೂರಲ್ಲಿ ಆಗಿ ಹೋಗಿವೆ. ಸುಮಾರು ಐವತ್ತು ವರ್ಷಗಳ ಹಿಂದೆ ಉಳ್ಳಾಲ ಸಂಕ (ನೇತ್ರಾವತಿ ಬ್ರಿಡ್ಜ್) ಇರಲಿಲ್ಲ. ಇತ್ತ ಮುಡಿಪು, ಹರೇಕಳ, ಪಾವೂರು, ಕೊಣಾಜೆಯಿಂದ ಹೋಗುವ, ಅತ್ತ ತಲಪಾಡಿ ಕಡೆಯಿಂದ ಹೋಗುವ ಬಸ್ಸುಗಳೆಲ್ಲಾ ಉಳ್ಳಾಲದ ಕೋಟೆಪುರದಲ್ಲಿ ಪ್ರಯಾಣಿಕರನ್ನು ಇಳಿಸಿ ಬರುತ್ತಿತ್ತು. ಜನ ಅಲ್ಲಿಂದ ದೋಣಿಯ ಮೂಲಕ ಮಂಗಳೂರು ತಲುಪುತ್ತಿದ್ದರು. ಉಳ್ಳಾಲ ಸಂಕ ಇಲ್ಲದ ಕಾಲವನ್ನು ಜನ ಮರೆತೇ ಬಿಟ್ಟಿದ್ದಾರೆ.ಅಂದಿನ ಯುವಕರೆಲ್ಲಾ ಇಂದು ಮುದುಕರಾಗಿದ್ದಾರೆ.ಹಿಂದೆ ವಿವಿಧ ಊರುಗಳಿಂದ ಬಸ್ಸುಗಳಲ್ಲಿ ಕೋಟೆಪುರಕ್ಕೆ ಬಂದಿಳಿಯುತ್ತಿದ್ದ ಜನಕ್ಕೆ ಉಳ್ಳಾಲದ ಕೋಟೆಪುರ ಮರೆತೇ ಹೋಗಿದೆ. ಕೋಟೆಪುರ ಕಡವಿಲ್ಲದೇ ತನ್ನೆಲ್ಲಾ ವೈಭವವನ್ನು ಕಳಕೊಂಡು ಈಗ ಬಿಕೋ ಎನ್ನುತ್ತಿದೆ.(ಕಡವು ಹೆಸರಿಗಿದೆ, ಆದರೆ ಚಟುವಟಿಕೆಗಳಿಲ್ಲ) ಅಂದು ಕೋಟೆಪುರದ ಮೂಲಕ ಮಂಗಳೂರಿಗೆ ಹೋಗುತ್ತಿದ್ದ ಇಂದಿನ ಇಬ್ಬರು ವೃದ್ಧರಲ್ಲಿ ಈಗಿನ ಮತ್ತು ಆಗಿನ ಕೋಟೆಪುರದ ವ್ಯತ್ಯಾಸ ಕೇಳಿದೆ. ಅವರು ನೆನಪಿನಾಳಕ್ಕಿಳಿದು ಹಿಂದಿನ ಕೋಟೆಪುರದ ವೈಭವವನ್ನು ವಿವರಿಸಿದರು.ಆದರೆ ನಮಗೆ ಕೋಟೆಪುರ ಹಾಗಿತ್ತೆಂದು ಕಲ್ಪಿಸಲೂ ಆಗುವುದಿಲ್ಲ.ಕೋಟೆಪುರದ ಹೊಸ ತಲೆಮಾರಿಗೆ ಕೋಟೆಪುರ ಈಗಲೂ ಚೆನ್ನಾಗಿಯೇ ಇದೆ ಎಂದೆನಿಸುತ್ತದೆ.ಯಾಕೆಂದರೆ ಅವರು ಹಳೇ ಕೋಟೆಪುರವನ್ನು ಕಂಡವರಲ್ಲ.
ಇದೇ ಉಳ್ಳಾಲ ಸೇತುವೆಯಾಗುವ ಮುನ್ನ ಕಾಸರಗೋಡಿಗರು ಮಂಗಳೂರು ನಗರಕ್ಕೆ ಹೋಗುತ್ತಿದ್ದ ದಾರಿ ಬೇರೆಯೇ ಆಗಿತ್ತು. ಅಂದು ಕಾಸರಗೋಡಿಗರು ಉಪ್ಪಳ-ಕನ್ಯಾನ ದಾರಿಯಾಗಿ ವಿಟ್ಲ ಪೇಟೆ ತಲುಪಿ ಅಲ್ಲಿಂದ ಪಾಣೆಮಂಗಳೂರು ಬ್ರಿಡ್ಜ್ ಮೂಲಕ ಮಂಗಳೂರು ತಲುಪುತ್ತಿದ್ದರು. ನೇತ್ರಾವತಿಗೆ ಪಾಣೆ ಮಂಗಳೂರಲ್ಲಿ ಕಟ್ಟಲಾದ ಹಳೇ ಬ್ರಿಡ್ಜ್‌ಗೆ ಸುಮಾರು ಎರಡು ಶತಮಾನಗಳ ಇತಿಹಾಸವಿದೆ.ಈಗ ಅದೇ ಕಾಸರಗೋಡಿಗರಿಗೆ ಉಪ್ಪಳ-ಕನ್ಯಾನ -ವಿಟ್ಲ ದಾರಿಯಾಗಿ ಸುತ್ತಿ ಬಳಸಿ ಮಂಗಳೂರು ತಲುಪುವುದನ್ನು ಊಹಿಸಲೂ ಸಾಧ್ಯವಿಲ್ಲ.ಈಗ ಕಾಸರಗೋಡಿಗರಿಗೆ ತೊಕ್ಕೊಟ್ಟು ಪೇಟೆ ದಾಟಿ ಉಳ್ಳಾಲ ಸಂಕದ ಮೂಲಕ ಮಂಗಳೂರು ತಲುಪಲು ಅಬ್ಬಬ್ಬಾ ಎಂದರೆ ಒಂದೂವರೆ ಗಂಟೆಯ ದಾರಿ.
ಒಟ್ಟಿನಲ್ಲಿ ಸೇತುವೆಗಳೆಂದರೆ ಅಭಿವೃದ್ದಿ, ಬದಲಾವಣೆ ಮತ್ತು ಊರುಗಳನ್ನು ಜೋಡಿಸುವ ಸುಲಭದ ದಾರಿಗಳು.ಜೊತೆ ಜೊತೆಗೆ ಹಳೇ ಚಿತ್ರಣ ಮರೆಸುವ ವಿಧವೂ ಹೌದು..
-ಇಸ್ಮತ್ ಪಜೀರ್