ಸರಕಾರದ ವೈಫಲ್ಯದಿಂದ ಇಂದು ಸಮಾಜದಲ್ಲಿ ಗೊಂದಲ ಸೃಷ್ಟಿ : ಮಾಜಿ ಶಾಸಕ ಜೆ.ಆರ್. ಲೋಬೋ ಆರೋಪ

ಮಂಗಳೂರು : ಗೂಂಡಾ ಕಾಯ್ದೆ, ಭಯೋತ್ಪಾದನಾ ನಿಗ್ರಹ ಮೊದಲಾದ ಕಾನೂನು ಜಾರಿಯಲ್ಲಿದ್ದರೂ, ಗೋಡೆ ಬರಹದಂತಹ ಪ್ರಕರಣಗಳು ನಡೆದಾಗ ಸರಕಾರ, ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರೆ, ಜಿಲ್ಲೆಯಲ್ಲಿ ಕುಕ್ಕರ್ ಬಾಂಬ್ ಸ್ಫೋಟದಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ. ಸರಕಾರದ ವೈಫಲ್ಯದಿಂದ ಇಂದು ಸಮಾಜದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಒಬ್ಬ ವ್ಯಕ್ತಿಯ ಅಪರಾಧಕ್ಕೆ ಇಡೀ ಸಮುದಾಯವನ್ನು ಸಂಶಯಿಸುವ, ಅನುಮಾನದಿಂದ ನೋಡುವ ಪ್ರಕ್ರಿಯೆ ನಡೆಯುತ್ತಿರುವುದು ಖಂಡನೀಯ. ಜನತೆ ಇಂತಹ ಊಹಾಪೋಹ, ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಸೌಹಾರ್ದತೆ ಕಾಪಾಡಬೇಕು ಎಂದು ಕರೆ ನೀಡಿದರು.

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕೆಲವೊಂದು ಪತ್ರಿಕೆ, ಚಾನೆಲ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹದ, ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಆದರೆ ಇಂತಹ ಸುದ್ದಿಗಳನ್ನು ಹರಡುವವರ ವಿರುದ್ಧ ಕ್ರಮ ಆಗುತ್ತಿಲ್ಲ. ಇತ್ತೀಚೆಗೆ ವ್ಯಕ್ತಿಯೊಬ್ಬರು ಗರ್ಭಿಣಿ ಮಹಿಳೆಗೆ ಚಿರತೆಯ ಮುಖ ಹಾಕಿದ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದಕ್ಕಾಗಿ ರಾತ್ರೋರಾತ್ರಿ ಅವರನ್ನು ಬಂಧಿಸಿ, ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ. ಆದರೆ ಸಮಾಜದಲ್ಲಿ ಒಡಕನ್ನು ಸೃಷ್ಟಿಸುವ ಊಹಾಪೋಹದ
ಸುದ್ದಿಗಳನ್ನು ಪ್ರಸಾರ ಮಾಡುವವರ ಬಗ್ಗೆ ಸರಕಾರ, ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ಯಾಕೆ ದಾಖಲಿಸಿಕೊಳ್ಳುತ್ತಿಲ್ಲ . ಇಂತಹ ದ್ವಂದ್ವ ನೀತಿ ಯಾಕೆ ಎಂದು ಅವರು ಪ್ರಶ್ನಿಸಿದರು.

ಚುನಾವಣೆ ಹತ್ತಿರ ಬರುವಾಗ ಸಮಾಜದಲ್ಲಿ ಇಂತಹ ಗೊಂದಲದ ವಾತಾವರಣ ಸೃಷ್ಟಿಸುವ ಕೆಲಸವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಇದರಿಂದಾಗಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಕುಂಠಿತಗೊಳ್ಳುತ್ತಿದೆ. ಬಂಡವಾಳ ಹೂಡಿಕೆಗೆ ಹಿಂದೇಟು ಹಾಕಲಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿಲ್ಲ. ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿಯನ್ನು ಭಯೋತ್ಪಾದ ಎನ್ನುವ ಮನಸ್ಥಿತಿಗೆ ಯಾರು ಕಾರಣ? ಇತ್ತೀಚೆಗೆ ನಂತೂರಿನಲ್ಲಿ ಒಂದೇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪರಸ್ಪರ ಮಾತನಾಡಿದ್ದಕ್ಕೆ ಅವರನ್ನು ಹಿಡಿದು ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯೆಂದರೆ ಪೊಲೀಸರು ಇಂತಹವರ ವಿರುದ್ಧ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಜೆ.ಆರ್. ಲೋಬೋ, ಸಮಾಜದ ಸ್ವಾಸ್ಥ ಕೆಡಿಸುವ ಯಾವುದೇ ಸಂಘ ಸಂಸ್ಥೆಗಳನ್ನು ನಿಷೇಧಿಸಿ ಗೂಂಡಾಕಾಯ್ದೆಯನ್ನು ಹೇರಿದಾಗ ಸಮಾಜದಲ್ಲಿ ಸೌಹಾರ್ದತೆ ನೆಲೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ವಿದ್ಯುತ್ ದರ ಏರಿಕೆ, ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯ ಹೊರೆಯ ಜತೆಗೆ ಜಿಎಸ್‌ಟಿಯಿಂದಾಗಿ ಜನಜೀವನ ಸಂಕಷ್ಟದಲ್ಲಿದೆ. ಆಡಳಿತ ಖರ್ಚು ಕಡಿಮೆ ಮಾಡಿದಾಗ ಈ ರೀತಿ ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಬಹುದು. ಆದರ ಸರಕಾರ ಈ ಬಗ್ಗೆ ನಿರ್ಲಕ್ಷ ವಹಿಸಿದೆ. ಬಿಜೆಪಿ ಆಡಳಿತ ಹಾಗೂ ಪೊಲೀಸ್ ವ್ಯವಸ್ಥೆ
ವೈಫಲ್ಯಗೊಂಡಿದ್ದು, ಇಂತಹ ಸರಕಾರ ಬೇಕಾ ಎಂಬ ಬಗ್ಗೆ ಜನ ಯೋಚನೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಪ್ರತಿ ವಿಚಾರದಲ್ಲೂ ವಿಪಕ್ಷ ದೂರು ನೀಡುತ್ತಾ ಹೋಗಬೇಕೆಂದೇನಿಲ್ಲ. ಜನರಿಗೆ ಜಾಗೃತಿ ಮೂಡಿಸುವುದು, ಆಡಳಿತ ಪಕ್ಷದ ವೈಫಲ್ಯವನ್ನು ಎತ್ತಿ ತೋರಿಸುವುದು ವಿಪಕ್ಷದ ಕರ್ತವ್ಯ ಅದನ್ನು ನಾವು ಮಾಡುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಜೆ.ಆರ್. ಲೋಬೋ ಪ್ರತಿಕ್ರಿಯಿಸಿದರು.

ಗೋಷ್ಠಿಯಲ್ಲಿ ಶಶಿಧರ ಹೆಗ್ಡೆ, ಕಳ್ಳಿಗೆ ತಾರನಾಥ ಶೆಟ್ಟಿ, ಶಾಲೆಟ್ ಪಿಂಟೋ, ಅಪ್ಪಿ, ಶುಭೋದಯ ಆಳ್ವ, ಸಂತೋಷ್ ಶೆಟ್ಟಿ, ಲುಕ್ಕಾನ್ ಬಂಟ್ವಾಳ, ಟಿ.ಕೆ. ಸುಧೀರ್, ಪ್ರಕಾಶ್ ಸಾಲ್ಯಾನ್, ಸಲೀಂ, ಶಾಂತಲಾ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು

Related Posts

Leave a Reply

Your email address will not be published.