ಆಳ್ವಾಸ್ ಜಾಂಬೂರಿ ಉತ್ಸವ : ಗದಗದಿಂದ 2 ಲಕ್ಷ ಜೋಳದ ರೊಟ್ಟಿ ಹೊರೆಕಾಣಿಕೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯೋಜನೆಯಲ್ಲಿ ಡಿ.21ರಿಂದ ನಡೆಯುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಗದಗ ಜಿಲ್ಲೆಯಿಂದ 2 ಲಕ್ಷ ಜೋಳದ ರೊಟ್ಟಿಯನ್ನು ಕಳುಹಿಸಲಾಗಿದೆ.ಉತ್ತರ ಕರ್ನಾಟಕದ ಗಟ್ಟಿ ಆಹಾರ ಎನಿಸಿಕೊಂಡಿರುವ ಜೋಳದ ರೊಟ್ಟಿ, ಶೇಂಗಾ ಚಟ್ನಿಯನ್ನು ಉಣಬಡಿಸುವ ನಿಟ್ಟಿನಲ್ಲಿ 2 ಲಕ್ಷ ಮಾಲದಂಡಿ ಜೋಳದ ರೊಟ್ಟಿಗಳನ್ನು ಕಳುಹಿಸಲಾಗುತ್ತಿರುವದು ಎಲ್ಲರ ಗಮನ ಸೆಳೆದಿದೆ. ಗದಗದಿಂದ 2 ಲಕ್ಷ ರೊಟ್ಟಿ, 2 ಕ್ವಿಂಟಲ್ ಶೇಂಗಾ ಚಟ್ನಿಯನ್ನು ಕಳುಹಿಸಲಾಗಿದೆ. ಗದಗ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಜಿಲ್ಲಾ ಕೇಂದ್ರಕ್ಕೆ ರೊಟ್ಟಿ, ಚಟ್ನಿ ಕಳುಹಿಸಲಾಗಿದ್ದು, ಗದಗ ಜಿಲ್ಲೆಯ ಮುಖಾಂತರ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಗೆ ಬಂದು ಸೇರಿದೆ.

ಕೆನಡಾ, ಮಲೇಷಿಯಾ, ಥೈಲ್ಯಾಂಡ್, ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೇರಿದಂತೆ 13 ದೇಶಗಳಿಂದ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, 10 ಸಾವಿರ ಶಿಕ್ಷಕರು ಭಾಗವಹಿಸಲಿದ್ದು, ಗದಗ ಜಿಲ್ಲೆಯಿಂದ 464 ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಗದಗದ ವಿವಿಧ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಭಾರತ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಮುತುವರ್ಜಿಯಲ್ಲಿ ಜೋಳದ ರೊಟ್ಟಿಯನ್ನು ಸಂಗ್ರಹಿಸಲಾಗಿದೆ.

ಸುತ್ತೂರು ಮಠದಿಂದ 300 ಕ್ವಿಂಟಾಲ್ ಸೆಕ್ಕರೆ, ಮಂಡ್ಯದಿಂದ 6000 ಕೆ.ಜಿರಾಗಿ,ಬೆಲ್ಲ, ಅಥಣಿಯಿಂದ ಸಕ್ಕರೆ, ಬಟಾಟೆ, ನೀರುಳ್ಳಿ, ಬಂಟ್ವಾಳದಿಂದ 1 ಸಾವಿರ ಕ್ವಿಂಟಲ್ ಅಕ್ಕಿ, 1 ಲಕ್ಷ ತೆಂಗಿನಕಾಯಿ, ಬೆಳ್ತಂಗಡಿಯಿಂದ 2 ಲಕ್ಷ ತೆಂಗಿನ ಕಾಯಿ, ಮಂಡ್ಯದಿಂದ ಬೆಲ್ಲ ಜಾಂಬೂರಿಗಾಗಿ ಬರಲಿದೆ. ಡಿ.17,18,19ರಂದು ವಿವಿಧ ಜಿಲ್ಲೆಗಳಿಂದ ಹೊರೆಕಾಣಿಕೆ ಬರಲಿದೆ.