ಬೆಳ್ತಂಗಡಿ: ಪತ್ರಕರ್ತ ಭುವನೇಂದ್ರ ಪುದುವೆಟ್ಟು ವಿಧಿವಶ

ವಿಜಯವಾಣಿ, ಕರಾವಳಿ ಅಲೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದ ಭುವನೇಂದ್ರ ಪುದುವೆಟ್ಟು(42ವ)ರವರು ನ.19ರಂದು ನಿಧನರಾಗಿದ್ದಾರೆ.

ಪುದುವೆಟ್ಟು ಗ್ರಾಮದ ನಿವಾಸಿ ನಾರಾಯಣ ಪೂಜಾರಿ ಮತ್ತು ಮೋಹಿನಿ ದಂಪತಿಯ ಪುತ್ರರಾದ ಭುವನೇಂದ್ರ ಅವರಿಗೆ ಎರಡು ದಿನಗಳ ಹಿಂದೆ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಅವರನ್ನು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತಪಾಸಣೆ ವೇಳೆ ಪಿತ್ತಕೋಶದಲ್ಲಿ ಕಲ್ಲು ಇರುವುದರಿಂದ ಅಕ್ಯುಟ್ ಪ್ರಾಂಕಿಯಾಸಿಸ್ ಇರುವುದು ಗೊತ್ತಾಗಿತ್ತು. ತಕ್ಷಣ ಅವರನ್ನು ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನ.19ರಂದು ಕೊನೆಯುಸಿರೆಳೆದಿದ್ದಾರೆ.

ಕರಾವಳಿ ಅಲೆ, ವೆಬ್‌ದುನಿಯಾ, ಕಸ್ತೂರಿ ಚಾನೆಲ್, ವಿಜಯವಾಣಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಭುವನೇಂದ್ರ ಪುದುವೆಟ್ಟು ಅವರು ಕೆಲವು ಸಮಯಗಳಿಂದ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿದ್ದರು. 2024ರ ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕದ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಮೃತರು ತಂದೆ ನಾರಾಯಣ ಪೂಜಾರಿ, ತಾಯಿ ಮೋಹಿನಿ, ಪತ್ನಿ ಸುಜಾತ, ಈರ್ವರು ಪುಟ್ಟ ಮಕ್ಕಳು ಮತ್ತು ಸಹೋದರ ಯತೀಂದ್ರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಭುವನೇಂದ್ರ ಅವರ ಪಾರ್ಥೀವ ಶರೀರವನ್ನು ಇಂದು ಮಧ್ಯಾಹ್ನ ಮಂಗಳೂರು ಆಸ್ಪತ್ರೆಯಿಂದ ಪುದುವೆಟ್ಟು ಮನೆಗೆ ಕರೆ ತಂದು ಅಂತಿಮ ವಿಧಿವಿಧಾನ ನಡೆಯಲಿದೆ.

Related Posts

Leave a Reply

Your email address will not be published.