ಧಾರ್ಮಿಕತೆ, ಸಾಂಸ್ಕೃತಿಕತೆ ತುಳುಜನರ ಉಸಿರು: ಕೆ.ಕೆ. ಪೇಜಾವರ

ಉಜಿರೆ: ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದ ಸಾ.ರಾ. ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ 25ನೆಯ ಸಾಹಿತ್ಯ ಸಮ್ಮೇಳನದ ಎರಡನೆಯ ದಿನ ‘ದೈವಾರಾಧನೆ ಮತ್ತು ತುಳುನಾಡು’ ಎಂಬ ವಿಷಯದ ಕುರಿತು ತುಳು ಜಾನಪದ ವಿದ್ವಾಂಸ ಮತ್ತು ವಿಜ್ಞಾನ ಶಿಕ್ಷಕ ಕೆ.ಕೆ. ಪೇಜಾವರ ಅವರು ವಿಶೇಷ ಉಪನ್ಯಾಸ ನೀಡಿದರು.

ದ್ರಾವಿಡ ಭಾಷಾ ವರ್ಗಗಳಲ್ಲಿ ತುಳು ಪ್ರಮುಖ ಭಾಷೆಯಾಗಿದೆ. ಇಂದಿನ ಕಾಲದಲ್ಲಿ ತುಳು ಭಾಷೆ ಮಹತ್ತರ ಭಾಷೆಯಾಗಿ ಬೆಳೆದು ಬಂದಿದೆ. ತುಳುನಾಡಿನಲ್ಲಿರುವ ಜನರು ಅನೇಕ ದೈವ-ದೇವರುಗಳನ್ನು ಆರಾಧನೆ ಮಾಡುತ್ತಾ ಜೀವನ ನಡೆಸುತ್ತಿದ್ದು, ಧಾರ್ಮಿಕತೆ ಮತ್ತು ಸಾಂಸ್ಕೃತಿಕತೆ ಇಲ್ಲಿನ ಜನರ ಉಸಿರಿನ ಜೊತೆ ಬೆರೆತು ಬಂದಿದೆ ಎಂದು ಅವರು ಹೇಳಿದರು.   

“ಪುರಾಣಗಳಲ್ಲಿ ಸ್ವರ್ಗಲೋಕ, ಭೂಲೋಕ ಮತ್ತು ಪಾತಾಳ ಲೋಕಗಳ ಉಲ್ಲೇಖವನ್ನು ಕಾಣಬಹುದಾಗಿದೆ. ತುಳುನಾಡು ಕೂಡ ಈ ಮೂರು ಲೋಕದಲ್ಲಿ ಒಂದಾಗಿದೆ ಎಂಬ ನಂಬಿಕೆ ಇದೆ. ‘ಪಾತಾಳನಾಡು’ ಎಂಬ ಶಬ್ದದಿಂದ ಕಾಲ ಕ್ರಮೇಣ ‘ಪಾ’ ಅಕ್ಷರ ಮಾಯವಾಗಿ ತಳನಾಡು ಎಂದಾಗಿ, ಮತ್ತೆ ಅದು ‘ತುಳುನಾಡು’ ಎಂಬುದಾಗಿ ಬದಲಾಯಿತು ಎಂದು ಕೆಲವು ಅಧ್ಯಯನದಿಂದ ತಿಳಿದು ಬರುತ್ತದೆ. ಈ ತುಳುನಾಡು ಪರಶುರಾಮ ಸೃಷ್ಟಿಯೇ ಅಥವಾ ಬೆರ್ಮೆರ್ ಸೃಷ್ಟಿಯೇ ಎಂಬ ಚರ್ಚೆ ಕೂಡಾ ಇಂದು ಮುನ್ನಲೆಯಲ್ಲಿದೆ” ಎಂದರು.

ತುಳುನಾಡಿನಲ್ಲಿ ತುಳುವೆ ಮತ್ತು ಬರ್ಕೆ ಎಂಬ ಎರಡು ವಿಧದ ಹಲಸಿನ ಹಣ್ಣುಗಳು ತುಂಬ ಪ್ರಸಿದ್ಧವಾಗಿವೆೆ. ಅದರಲ್ಲಿ ತುಳುವೆ ಹಲಸು ಬಹಳ ಮೃದುವಾಗಿರುವ ಕಾರಣ ಈ ನಾಡು ತುಳುನಾಡು ಆಗಿರಬಹುದು ಕೆಲವು ಪ್ರಸಿದ್ಧ ಸಾಹಿತಿಗಳು ಅಭಿಪ್ರಾಯ ಪಡುತ್ತಾರೆ ಎಂದು ಅವರು ತಿಳಿಸಿದರು. 

ತುಳುನಾಡು ಸತ್ಯ, ಧರ್ಮ, ನಾಗ ಸಾನ್ನಿಧ್ಯ ಹೊಂದಿರುವ ಪವಿತ್ರ ಮಣ್ಣಿನ ನಾಡಾಗಿದೆ. ತುಳುನಾಡಿನಲ್ಲಿ ಹುಟ್ಟಿದ ಪ್ರತಿಯೊಂದು ಮಗು ಇಲ್ಲಿನ ಆಚಾರ-ವಿಚಾರ, ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ಬೆಳೆದು ಉತ್ತಮ ವ್ಯಕ್ತಿಯಾಗಿ ಬೆಳೆಯುತ್ತದೆ. ಹೀಗೆ ಎಲ್ಲವನ್ನೂ ಮೈಗೂಡಿಸಿಕೊಂಡು ಬೆಳೆದ ಈ ನಾಡಿನ ಪ್ರತಿಯೊಬ್ಬ ವ್ಯಕ್ತಿಯನ್ನು ‘ತುಳುವೆದಿ’ ಅಥವಾ ‘ತುಳುವೆ’ ಎಂದು ಕರೆಯುತ್ತಾರೆ. ತುಳುನಾಡಿನ ಬದುಕು ಅತ್ಯಂತ ಶ್ರೇಷ್ಠ ಬದುಕುಗಳಲ್ಲಿ ಒಂದಾಗಿದೆ. ತುಳುನಾಡಿನ ಜನರು ದಾನ ಧರ್ಮಗಳಿಗೆ ಹೆಸರುವಾಸಿಯಾದವರು ಎಂದು ಅವರು ಬಣ್ಣಿಸಿದರು.  

ದೈವಾರಾಧನೆಯಲ್ಲಿ ಬರುವ ಪಾಡ್ದನಗಳಲ್ಲಿ ತುಳುನಾಡಿನ ಶ್ರೀಮಂತ ಬದುಕಿನ ಮಹತ್ವ  ಮತ್ತು ಸಂಸ್ಕೃತಿಯ ಕುರಿತಾದ ಹಲವಾರು ಮಾಹಿತಿಗಳನ್ನು ಕಾಣಬಹುದಾಗಿದೆ. ತುಳುನಾಡಿನ ದೈವಗಳು ಯಾವುದೇ ರೀತಿಯ ಆಡಂಬರವನ್ನು ಬಯಸದೆ, ಕೇವಲ ಶುದ್ಧ ಭಕ್ತಿಯಿಂದ ಆರಾಧಿಸಿದರೆ ಬಹುಬೇಗನೆ ಒಲಿಯುತ್ತವೆ. ಇಂತಹ ದೈವಗಳನ್ನು  ಆರಾಧಿಸಿಕೊಂಡು ಬರುತ್ತಿರುವ ತುಳುವರ ಬದುಕು ನಿಜಕ್ಕೂ ಅರ್ಥಪೂರ್ಣ. ತುಳು ಭಾಷೆಯು ಸಾಹಿತ್ಯಕ್ಕೆ ತನ್ನದೇ ಆದ ಅಪಾರ ಕೊಡುಗೆ ನೀಡಿದೆ. ತುಳು ಭಾಷೆಯು ತನ್ನ ಒಡಲಲ್ಲಿ ಹಲವಾರು ಶಬ್ದಗಳನ್ನು ಒಳಗೊಂಡಿದೆ ಎಂದ ಅವರು, “ಹೀಗೆ ಹಲವು ವೈಶಿಷ್ಟ್ಯಗಳಿಂದ ಕೂಡಿದ ತುಳುನಾಡಿನ ಬದುಕು ಮತ್ತು ಆಚಾರ-ವಿಚಾರ ಸಂಸ್ಕೃತಿಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಪ್ರತಿಯೊಂದು ತುಳುನಾಡಿನ ಜನರ ಮೇಲಿದೆ” ಎಂದು ಪ್ರತಿಪಾದಿಸಿದರು. 

ವೇದಿಕೆಯಲ್ಲಿ ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ರಾಜೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.

ಚಿತ್ರ ಮತ್ತು ವರದಿ : ಶಶಿಧರ ನಾಯ್ಕ ಎ.

ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್. ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

Related Posts

Leave a Reply

Your email address will not be published.