ಕಾರ್ಮಿಕ ಮುಂದಾಳು ರಮೇಶ್ ರೈ ಮತ್ತು ಮೃತ ಯುವತಿ ರಂಜಿತ ರವರ ನಿಧನಕ್ಕೆ ಸಿಪಿಐ ತೀವ್ರ ಆಘಾತ

ಮಂಗಳೂರು.ಫೆ.20. ಭಾರತ ಕಮ್ಯೂನಿಸ್ಟ್ ಪಕ್ಷದ ಕಡಬ ತಾಲೂಕಿನ ಉಪ ಕಾರ್ಯದರ್ಶಿ, ಪುತ್ತೂರು ತಾಲೂಕು ಬೀಡಿ ಲೇಬರ್ ಯೂನಿಯನ್(ಎಐಟಿಯುಸಿ) ನ ಜತೆ ಕಾರ್ಯದರ್ಶಿ ಸುಮಾರು 55 ವರ್ಷ ಪ್ರಾಯದ ರಮೇಶ್ ರೈ ಅವರು ಇಂದು ಮುಂಜಾನೆ ಆನೆ ದಾಳಿಯಿಂದ ಸ್ಥಳೀಯ ಯುವತಿ ರಂಜಿತಳನ್ನು ರಕ್ಷಿಸುವ ಸಲುವಾಗಿ ತಾವೇ ಸ್ವತಃ ಆನೆ ದಾಳಿಗೆ ತುತ್ತಾಗಿ ಗಂಭೀರ ಸ್ವರೂಪದ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ರಮೇಶ್ ರೈ ಹಾಗೂ 21 ವರ್ಷ ಪ್ರಾಯದ ಕುಮಾರಿ ರಂಜಿತ ಇವರುಗಳ ಅಕಾಲಿಕ ಮರಣಕ್ಕೆ ಸಿಪಿಐ ಹಾಗೂ ಎಐಟಿಯುಸಿ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಮೃತರು ಸಾಮಾಜಿಕ ಕಾರ್ಯಕರ್ತನಾಗಿ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರಲ್ಲದೇ ಕಾರ್ಮಿಕರ, ದೀನದಲಿತರ ಹಕ್ಕು
ಬಾಧ್ಯತೆಗಳಿಗಾಗಿ ನಿರಂತರ ಶ್ರಮಿಸುತ್ತಿದ್ದರು. ಪರೋಪಕಾರಿ ಗುಣವನ್ನು ಮೈಗೂಡಿಸಿಕೊಂಡ ರಮೇಶ್ ರೈ ಇಂದಿನ ಘಟನೆಗೆ ಸಾಕ್ಷಿಯಾಗಿದ್ದು ಯುವತಿಯ ರಕ್ಷಿಸಲು ಹೋಗಿ ತಾವೇ ಬಲಿಯಾಗಿರುವುದು ದುರಂತ. ಇವರ ನಿಧನದಿಂದ ಪಕ್ಷ ಹಾಗೂ ಟ್ರೇಡ್ ಯೂನಿಯನ್ ಗೆ ಅಪಾರ ನಷ್ಟ ಉಂಟಾಗಿದೆ.

ಕಡಬ ತಾಲೂಕಿನ ಜನ ನಿಬಿಡ ಪ್ರದೇಶದಲ್ಲಿ ಈ ಹಿಂದೆ ಕೂಡಾ ಕಾಡಾನೆ ದಾಳಿಯಿಂದ ಹಲವಾರು ಜೀವ ಹಾನಿ ಮತ್ತು ಬೆಳೆ ಹಾನಿಯ ನಿದರ್ಶನಗಳಿದ್ದರೂ ಅರಣ್ಯ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಇನ್ನಾದರೂ ಸರ್ಕಾರ ಮತ್ತು ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಮೃತರ ಕುಟುಂಬಕ್ಕೆ ಕನಿಷ್ಠ ತಲಾ ರೂ.40 ಲಕ್ಷ ಪರಿಹಾರ ಪಾವತಿಸುವಂತೆ ಸಿಪಿಐ ಒತ್ತಾಯಿಸುತ್ತದೆ.
ಮೃತರ ಅಂತಿಮ ದರ್ಶನ ಪಡೆದ ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಸಿಪಿಐ ಹಿರಿಯ ಮುಂದಾಳು ಬಿ.ಬಾಬು ಭಂಡಾರಿ, ಮಾಜೀ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಎಚ್ ವಿ ರಾವ್, ಪ್ರಧಾನ ಕಾರ್ಯದರ್ಶಿ ವಿ.ಎಸ್ ಬೇರಿಂಜ, ಸಿಪಿಐ ಮಂಗಳೂರು ತಾಲೂಕು ಕಾರ್ಯದರ್ಶಿ ಎಂ.ಕರುಣಾಕರ್ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್ ಸಂತಾಪ ಸಲ್ಲಿಸಿದರು.
