ಕಡಬ: ಆರು ವರ್ಷಗಳಿಂದ ವಾಸವಾಗಿದ್ದ ಮನೆ ನೆಲಸಮ-ವೃದ್ಧರು ಅತಂತ್ರ

ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿ 6 ವರುಷಗಳಿಂದ ವಾಸವಾಗಿದ್ದ ವೃದ್ಧ ದಂಪತಿಗಳ ಮನೆಯನ್ನು ಏಕಏಕಿಯಾಗಿ ಮಂಗಳವಾರ ಬೆಳ್ಳಂಬೆಳಗೆ ಪೊಲೀಸರ ಸಹಾಯದೊಂದಿಗೆ ಕಡಬದ ಕಂದಾಯ ಅಧಿಕಾರಿಗಳು ನೆಲಸಮ ಮಾಡಿದ ಘಟನೆ ನಡೆದಿದೆ.
ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ವಾಸವಾಗಿರುವ ರಾಧಮ್ಮ ಮತ್ತು ಮುತ್ತುಸ್ವಾಮಿ ವೃದ್ಧ ದಂಪತಿಗಳಿಗೆ ಸೇರಿದ ಮನೆಯಾಗಿದೆ.
ದಂಪತಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಹಟ್ಟಿಯವರು. ಕೂಲಿ ಕೆಲಸಕ್ಕಾಗಿ ಕರಾವಳಿಗೆ ಆಗಮಿಸಿ ಕಡಬ ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮಕ್ಕೆ ಆಗಮಿಸಿ ವಾಸಗಿದ್ದಾರೆ. ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದ ಸರ್ವೇ ನಂಬ‌ರ್ 123/1ರಲ್ಲಿ ಕಳೆದ 6 ವರ್ಷಗಳಿಂದ ವಾಸಿಸುತ್ತಿದ್ದಾರೆ.


ದಂಪತಿಗೆ ಯಾವುದೆ ಪಿತ್ರಾರ್ಜಿತ ಆಸ್ತಿ ಇಲ್ಲ. ಹೀಗಾಗಿ ಸರ್ಕಾರಿ ಜಾಗ 123/1ರಲ್ಲಿ ಕಾಪಿನಬಾಗಿಲು ಎಂಬಲ್ಲಿ ಸಣ್ಣ ಮನೆಕಟ್ಟಿಕೊಂಡಿದ್ದರು. ದಂಪತಿ ನಿತ್ಯ ಕೂಲಿ ಕೆಲಸ ಮಾಡುತ್ತಾ ಹಾಗೂ ಪುಟ್ಟ ಅಂಗಡಿಯೊಂದನ್ನು ನಿರ್ಮಿಸಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ವೃದ್ಧ ದಂಪತಿ ಸರ್ಕಾರಿ ಜಾಗದಲ್ಲಿ ಇದ್ದಾರೆ ಎಂಬ ಕಾರಣಕ್ಕಾಗಿ ಬೆಳ್ತಂಗಡಿ ತಾಲೂಕಿನ ಅಶೋಕ್ ಆಚಾರ್ಯ ಎಂಬವರು ಇವರನ್ನು ಒಕ್ಕಲೆಬ್ಬಿಸುವ ಸಲುವಾಗಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಸರ್ಕಾರಿ ಜಾಗ ಖಾಲಿ ಮಾಡಲು ಹೈಕೋರ್ಟ್ ಸೂಚನೆ ನೀಡಿದ ಕಾರಣ ಕಳೆದ ಫೆಬ್ರವರಿಯಲ್ಲೇ ಮನೆ ತೆರವಿಗೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೆ ಕೆಡವದೆ ಪ್ರಕರಣ ತಣ್ಣಗಾಗಿತ್ತು.

ಆದರೆ ಮಂಗಳವಾರ ದಿಢೀ‌ರ್ ಎಂದು ಆಗಮಿಸಿದ ಅಧಿಕಾರಿಗಳು ಮನೆಯ ವಸ್ತುಗಳನ್ನು ಹೊರಗಿಟ್ಟು ಮನೆಯನ್ನು ಕೆಡವಿ ಹಾಕಿದ್ದಾರೆ. ವೃದ್ಧ ದಂಪತಿ ಕಣ್ಣೀರು ಹಾಕಿದರೂ ಕರಗದ ಅಧಿಕಾರಿಗಳು ಮನೆ ತೆರವುಗೊಳಿಸಿದ್ದಾರೆ. ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಆರ್‌.ಐ ಪೃಥ್ವಿರಾಜ್, ಉಪ್ಪಿನಂಗಡಿ ಪೊಲೀಸರ ನೇತೃತ್ವದಲ್ಲಿ ಮನೆ ತೆರವು ಮಾಡಲಾಗಿದೆ.
ಈಗ ಸೂರು ಕಳೆದುಕೊಂಡಿರುವ ವೃದ್ಧ ದಂಪತಿ ನಮಗೆ ಈ ಸರ್ಕಾರಿ ಜಾಗದಲ್ಲಿ ನಾವು ನಿರ್ಮಿಸಿರುವ ಸಣ್ಣ ಮನೆಯಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ. ಅಥವಾ ದಯಮಾಡಿ ವೃದ್ಧರಾದ ನಮಗೆ ದಯಾಮರಣ ಅಥವಾ ಇನ್ನಾವುದೇ ರೀತಿಯಲ್ಲಿ ಒಳ್ಳೆಯ ಮರಣಕ್ಕೆ ಅವಕಾಶವನ್ನು ನೀಡಿ ಎಂದು ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದಾರೆ.

add - Rai's spices

Related Posts

Leave a Reply

Your email address will not be published.