ಕಂಬಳಕ್ಕೆ ಸುಪ್ರಿಂಕೋರ್ಟ್ ಮಾನ್ಯತೆ – ಮೇ 18 ಕಂಬಳಕ್ಕೆ ಐತಿಹಾಸಿಕ ದಿನ

ಮೂಡುಬಿದಿರೆ: ಕರಾವಳಿಯ ಜಾನಪದ ಕ್ರೀಡೆ ಕಂಬಳ. ರಾಜ್ಯದಲ್ಲಿ ಪ್ರಾಣಿ ಹಿಂಸಾ ತಡೆ ಕಾಯ್ದೆಗೆ ತಿದ್ದುಪಡಿ ತಂದು ಕರಾವಳಿ ಕರ್ನಾಟಕದಲ್ಲಿ ನಡೆಯುವ ಕಂಬಳಕ್ಕೆ ಮಾನ್ಯತೆ ನೀಡಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಪ್ರಾಣಿ ದಯಾ ಸಂಘಗಳು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಗ್ರೀನ್ ಸಿಗ್ನಲ್ ನೀಡಿರುವುದಕ್ಕೆ ಕಂಬಳ ಸಮಿತಿ ಸಂತಸ ವ್ಯಕ್ತಪಡಿಸಿದ್ದು, ಈ ದಿನ ಕಂಬಳ ಕ್ಷೇತ್ರದಲ್ಲಿ ಐತಿಹಾಸಿಕ ದಿನ ಎಂದು ಕಂಬಳ ಸಮಿತಿ ಬಣ್ಣಿಸಿದೆ.

ಈ ಬಗ್ಗೆ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಮೂಡುಬಿದರೆ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, 2014ರಿಂದ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ, ಧಾರ್ಮಿಕ ಹಾಗೂ ಜಾನಪದ ಆಚರಣೆಯಾದ ಕಂಬಳವನ್ನು ಆಯೋಜಿಸಲು ಪ್ರಾಣಿದಯಾ ಸಂಘಗಳು ವಿವಿಧ ರೀತಿಯ ತೊಂದರೆಗಳನ್ನು ನೀಡುತ್ತಿದ್ದು, ಈ ಬಗ್ಗೆ ಕರ್ನಾಟಕ ಹೈಕೋರ್ಟ್‍ನಲ್ಲಿ ಅನೇಕ ಬಾರಿ ಹೋರಾಟ ನಡೆದಿದೆ. ಪ್ರಾಣಿದಯಾ ಸಂಘದವರು ಸಲ್ಲಿಸಿದ ರಿಟ್ ಅರ್ಜಿಯಂತೆ 2016ರಲ್ಲಿ ಕಂಬಳವೇ ನಿಂತುಹೋಗಿತ್ತು. ಈ ಸಂದರ್ಭದಲ್ಲಿ ಮತ್ತೆ ಕಂಬಳ ಸಂಘಟಿಸಲು ಈ ಕ್ಷೇತ್ರದ ಹಿರಿಯರಾದ ಭಾಸ್ಕರ್ ಕೋಟ್ಯಾನ್ ನೇತೃತ್ವದಲ್ಲಿ ನ್ಯಾಯಾಲಯದಲ್ಲಿ ಮತ್ತು ಹೊರಗಡೆಯೂ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದೆ. 2018ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪ್ರಾಣಿ ಹಿಂಸಾ ತಡೆ ಕಾಯ್ದೆಗೆ ತಿದ್ದುಪಡಿ ತಂದು, ಸದ್ರಿ ತಿದ್ದುಪಡೆ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದರು. ಆದರೆ ಪಂಚಪೀಠ ಸಮಿತಿಯು ಸೂಕ್ತ ವಾದ ಪ್ರತಿ ವಾದ ಆಲಿಸಿ ರಿಟ್ ಅರ್ಜಿಯನ್ನು ವಜಾಗೊಳಿಸುವ ಮೂಲಕ ಕಳೆದ 20 ವರ್ಷಗಳಿಂದ ಇದ್ದ ಅಡ್ಡಿ ಆತಂಕ ನಿವಾರಣೆಯಾಗಿದೆ.
ಕಂಬಳ ಸಮಿತಿ ಹೋರಾಟಕ್ಕೆ ಶ್ರಮಿಸಿದ ಜಿಲ್ಲಾ ಕಂಬಳ ಸಮಿತಿ ಸಹಿತ ವಿವಿಧ ಕಂಬಳ ಸಮಿತಿಯ ಪದಾಧಿಕಾರಿಗಳು, ಕೋಣಗಳ ಯಜಮಾನರು, ಓಟಗಾರರು ಹಾಗೂ ಕ್ಷೇತ್ರದ ವಿವಿಧ ವರ್ಗಗಳ ಜನರನ್ನು, ಅಭಿಮಾನಿಗಳಿಗೆ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದು ರೋಹಿತ್ ಹೆಗ್ಡೆ ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ರಕ್ಷಿತ್ ಜೈನ್, ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿಯ ತೀರ್ಪುಗಾರರ ಸಂಚಾಲಕ ಸುರೇಶ್ ಕೆ ಪೂಜಾರಿ ರೆಂಜಾಳ ಕಾರ್ಯ, ಮಾಜಿ ಸಂಚಾಲಕ ಸೀತಾರಾಮ ಶೆಟ್ಟಿಯವರು ನ್ಯಾ. ಮೂ. ಕೆ. ಎಂ. ಜೋಸೆಫ್ ನೇತೃತ್ವದ ಪಂಚಪೀಠದ ತೀರ್ಪನ್ನು ಅಭಿನಂದಿಸಿದರು.

Related Posts

Leave a Reply

Your email address will not be published.