ಕರಾವಳಿಯಲ್ಲಿ ಈದುಲ್ ಫಿತ್ರ್ ಹಬ್ಬದ ಸಂಭ್ರಮ

ಕರಾವಳಿಯಲ್ಲಿ ಇಂದು ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು. ನಗರದ ಪ್ರಮುಖ ಮಸೀದಿಗಳಿಗೆ ತೆರಳಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಸಂಭ್ರಮವನ್ನು ವಿನಿಮಯಮಾಡಿಕೊಂಡರು. ಜಿಲ್ಲೆಯ ಬಹುತೇಕ ಎಲ್ಲಾ ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಝ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂತು.

ನಗರದ ಬಾವುಟಗುಡ್ಡದ ಈದ್ಗಾ ಜುಮಾ ಮಸ್ಜಿದ್‍ನಲ್ಲಿ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ನೇತೃತ್ವದಲ್ಲಿ ಮತ್ತು ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‍ನಲ್ಲಿ ಖತೀಬ್ ಇಬ್ರಾಹೀಂ ಸಅದಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು. ಮಂಗಳೂರು ಬಾವುಟಗುಡ್ಡದ ಈದ್ಗಾ ಮಸೀದಿಗೆ ಮಾಜಿ ಸಚಿವ ಯು.ಟಿ.ಖಾದರ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ ಸೌಹಾರ್ದ ಭೇಟಿ ನೀಡಿದರು. ಈದ್ಗಾ ಮಸೀದಿ ಅಧ್ಯಕ್ಷ ಯೆನೆಪೊಯ ಅಬ್ದುಲ್ಲಾ ಕುಂಞ ಈದ್ ಸಂದೇಶ ನೀಡಿದರು. ಮಾಜಿ ಮೇಯರ್ ಕೆ. ಅಶ್ರಫ್, ಈದ್ಗಾ ಮಸ್ಜಿದ್ ಕೋಶಾಧಿಕಾರಿ ಸೈಯದ್ ಬಾಷಾ ತಂಙಳ್, ಅದ್ದು ಹಾಜಿ, ಸಮದ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.