ಮೇ 10ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 13ರಂದು ಫಲಿತಾಂಶ

ಭಾರತೀಯ ಚುನಾವಣಾ ಆಯೋಗ (ಇಸಿಐ) ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ. 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು ಒಂದೇ ಹಂತದ ಮತದಾನ ಹಾಗೂ ಮೇ 13ರಂದು ಮತ ಎಣಿಕೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದರು.

ದೆಹಲಿಯ ವಿಜ್ಞಾನ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದರು. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 10 ರಂದು ಮತದಾನ ನಡೆಯಲಿದೆ. ಮೇ 13ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಏಪ್ರಿಲ್ 13ರಂದು ಚುನಾವಣೆಗೆ ಅಧಿಸೂಚನೆ ಆರಂಭವಾಗಲಿದ್ದು, ಇಂದಿನಿಂದಲೇ ನೀತಿಸಂಹಿತೆ ಜಾರಿಗೆ ಬರಲಿದೆ. ರಾಜ್ಯದಲ್ಲಿ 5.22 ಕೋಟಿ ಮತದಾರರರಿದ್ದು, 2,62,42,561 ಪುರುಷ ಮತದಾರರು, 2,59,26,319 ಮಹಿಳಾ ಮತದಾರರು ಇದ್ದಾರೆ.

ಇದರಲ್ಲಿ 9,17,241 ಮೊದಲ ಬಾರಿ ಮತದಾರರು, 80 ವರ್ಷ ಮೇಲ್ಪಟ್ಟ 12,15,763 ಮತದಾರರು. ದಿವ್ಯಾಂಗರು 5,55,073 ಮತದಾರರು, 4,699 ತೃತೀಯ ಲಿಂಗಿ ಮತದಾರರು ಇದ್ದಾರೆ.

ರಾಜ್ಯದಲ್ಲಿ ಈ ಬಾರಿ ಒಟ್ಟು 52,282 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 12 ಸಾವಿರ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. 24,063 ನಗರ ಪ್ರದೇಶದಲ್ಲಿ, 34,219 ಗ್ರಾಮೀಣ ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿವೆ. ಯುವಕರಿಗಾಗಿ 224 ಪ್ರತ್ಯೇಕ ಮತಗಟ್ಟೆ, ಮಹಿಳೆಯರಿಗಾಗಿ 1320 ಮತಗಟ್ಟೆಗಳು ಸೇರಿ ಸರಾಸರಿ 883 ಮತದಾರರಿಗೊಂದು ಮತಗಟ್ಟೆ ನಿರ್ಮಾಣ ಮಾಡಲಾಗುತ್ತದೆ.

ಅಭ್ಯರ್ಥಿಯ ಅಫಿಡವಿಟ್ ಕೂಡ ಆಪ್‍ನಲ್ಲೇ ಲಭ್ಯವಿರಲಿದ್ದು, ಚುನಾವಣಾ ಅಕ್ರಮದ ಬಗ್ಗೆ ಆಪ್‍ನಲ್ಲೇ ಮತದಾರರು ದೂರು ಸಲ್ಲಿಸಬಹುದಾಗಿದೆ. ದೂರು ಸಲ್ಲಿಸಿದರೆ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ. ಚುನಾವಣಾ ಅಕ್ರಮ ತಡೆಗೆ 2400 ತಂಡಗಳ ರಚನೆ ಮಾಡಲಾಗಿದೆ.

Related Posts

Leave a Reply

Your email address will not be published.