ಕಟಪಾಡಿ: ಗ್ರಾಹಕರನ್ನು ಆಕರ್ಷಿಸುತ್ತಿರುವ ರಾಸಾಯನಿಕ ಮುಕ್ತ ಕಲ್ಲಂಗಡಿ ಹಣ್ಣುಗಳು..!!

ಕೃಷಿಯನ್ನೇ ನಂಬಿ ಜೀವನ ನಡೆಸುವ ಕಟಪಾಡಿಯ ಅಂಬಾಡಿ ಬೈಲು ಕೋಟೆ ಮಟ್ಟುವಿನ ರವಿ ಶೇರಿಗಾರ್ ಐದು ಬಗೆಯ ಕಲ್ಲಂಗಡಿ ಹಣ್ಣು ಸಹಿತ ವಿವಿಧ ಬಗೆಯ ಕೃಷಿ ಉತ್ಪನ್ನಗಳನ್ನು ನಡೆಸಿ ತನ್ನ ಮನೆಯನ್ನೇ ಮಾರುಕಟ್ಟೆಯನ್ನಾಗಿಸಿ ಯಶಸ್ವಿ ಕೃಷಿಕರಾಗಿದ್ದಾರೆ.
ರವಿ ಶೇರಿಗಾರ್ ಕಳೆದ ಸುಮಾರು ಹತ್ತು ವರ್ಷಗಳಿಂದ ಐದು ಎಕರೆ ಗದ್ದೆಯಲ್ಲಿ ಕಲ್ಲಂಗಡಿ ಹಣ್ಣು, ಮಟ್ಟುಗುಳ್ಳ, ಸೌತೆಕಾಯಿ, ಮುಳ್ಳುಸೌತೆ, ಹೀರೇಕಾಯಿ ಹಾಗೂ ಕಪ್ಪು ಹೆಸರು ಇವುಗಳನ್ನು ಬೆಳೆಸಿ ಉತ್ತಮ ಪಸಲು ತೆಗೆಯುವಲ್ಲಿ ಯಶಸ್ಸು ಕಂಡಿದ್ದಾರೆ, ರಾಸಾಯನಿಕ ಗೊಬ್ಬರವನ್ನೇ ನೆಚ್ಚಿಕೊಳ್ಳುವ ಈ ಕಾಲಘಟ್ಟದಲ್ಲಿ ಸಾವಯವ ಗೊಬ್ಬರ ಬಳಸಿ ಉತ್ತಮ ಇಳುವರಿ ಪಡೆದ ಇವರು ತನ್ನ ಬೆವರ ಹನಿಗೆ ತಕ್ಕಂತೆ ಉತ್ತಮ ಪಸಲು ಬಂದಿದ್ದು ನಾನು ಸಂತುಷ್ಟನಾಗಿದ್ದೇನೆ ಎನ್ನುತ್ತಾರೆ. ನಾವು ತಿನ್ನುವ ಪ್ರತೀ ಆಹಾರದಲ್ಲೂ ವಿಷದ ಅಂಶ ಇದೆ ಎಂಬುದು ಅಲ್ಲಗಳೆಯುವಂತ್ತಿಲ್ಲ, ಆದರೆ ಮನುಷ್ಯ ಜೀವಕ್ಕೆ ಹಾನಿಯಾಗುವ ರಾಸಾಯನಿಕವನ್ನು ದೂರವಿಟ್ಟು ಕೃಷಿ ಚಟುವಟಿಕೆ ನಡೆಸುತ್ತಿರುವ ಇವರ ಕೃಷಿ ಉತ್ಪನ್ನಗಳನ್ನು ಕರೀದಿ ಮಾಡಲು ಎಲ್ಲೆಲ್ಲಿಂದಲೂ ಗ್ರಾಹಕರು ಮನೆಯನ್ನು ಹುಡುಕಿಕೊಂಡು ಬರುತ್ತಾರೆ.

ಪ್ರಮುಖವಾಗಿ ಕಲ್ಲಂಗಡಿ ಹಣ್ಣಿನ ಕೃಷಿಯನ್ನೇ ನೆಚ್ಚಿಕೊಂಡಿರುವ ಇವರ ಗದ್ದೆಯಲ್ಲಿ ಐದು ಬಗೆಯ ಹಣ್ಣುಗಳಿದೆ, ರಾಕ್ ಸ್ಟಾರ್, ಪ್ರೇಕ್ಷ, ಟೈಗರ್, ಆರೋಹಿ ಹಾಗೂ ವಿಶಾಲ್ ಹೀಗೆ ಕಲ್ಲಂಗಡಿಯಲ್ಲೂ ಐದು ಬಗೆಯ ಬೇರೆ ಬೇರೆ ಹೆಸರಿನ ಹಣ್ಣುಗಳಿವೆ. ರಾಕ್ ಸ್ಟಾರ್, ಪ್ರೇಕ್ಷ, ಟೈಗರ್ ಇವುಗಳು ಮಾಮೂಲು ಬಹುತೇಕ ಕಡೆಗಳಲ್ಲಿ ದೊರಕುತ್ತಿದೆಯಾದರೂ, ಆರೋಹಿ ಹಾಗೂ ವಿಶಾಲ್ ಬಣ್ಣದಲ್ಲೂ ರುಚಿಯಲ್ಲೂ ಬಹಳ ಭಿನ್ನವಾಗಿದೆ. ಆರೋಹಿಯ ಸಿಪ್ಪೆ ಹಸುರು ಬಣ್ಣದ್ದಾಗಿದ್ದರೂ ಒಳಭಾಗ ಸಂಪೂರ್ಣ ಹಳದಿ ಬಣ್ಣದಿಂದ ಕೂಡಿದೆ, ವಿಶಾಲ್ ಹೆಸರಿನ ಹಣ್ಣಿನ ಸಿಪ್ಪೆ ಹಳದಿ ಬಣ್ಣದ್ದಾಗಿದ್ದು ಒಳಭಾಗ ಕೇಸರಿ ಬಣ್ಣದಿಂದ ಕೂಡಿ ತಿನ್ನಲು ಬಾರೀ ರುಚಿಕರ.

ಮಾಮೂಲು ಕಲ್ಲಂಗಡಿ ಹಣ್ಣಿನ ಬೀಜ ಉಡುಪಿಯಲ್ಲಿ ಕರೀದಿ ಮಾಡ ಬಹುದಾಗಿದ್ದರೂ, ಆರೋಹಿ ಹಾಗೂ ವಿಶಾಲ್ ಬೀಜಕ್ಕಾಗಿ ಹಾಸನಕ್ಕೆ ಹೋಗ ಬೇಕಾಗಿದೆ, ಭತ್ತ ಕಟಾವು ನಡೆದ ಬಳಿಕ ಈ ಕೃಷಿ ಚಟುವಟಿಕೆಗೆ ನಾನು ನನ್ನ ಕುಟುಂಬ ಹಾಗೂ ಅಗತ್ಯ ಬಿದ್ದರೆ ಹೊರಗಿನ ಇಬ್ಬರು ಕೂಲಿಯಾಳುಗಳನ್ನು ಬಳಸಿಕೊಳ್ಳುತ್ತೇನೆ ಎನ್ನುವ ರವಿ ಶೇರಿಗಾರ್, ಬೀಜ ಹಾಕಿದ ಎಪ್ಪತ್ತೈದು ದಿನಗಳಲ್ಲಿ ಪಸಲು ಕಟಾವಿಗೆ ಬರುತ್ತದೆ, ನವಿಲು, ಮುಳ್ಳುಹಂದಿ ಹೀಗೆ ಕೆಲವೊಂದು ಪ್ರಾಣಿಗಳಿಂದ ಕೃಷಿಗೆ ಹಾನಿಯಾಗುವುದನ್ನು ತಪ್ಪಿಸಲು ಕೃಷಿ ಗದ್ದೆಗೆ ನೆಟ್ ಅಳವಡಿಕೆ ಮಾಡುತ್ತೇವೆ, ನಾವು ಬೆಳೆದ ಕೃಷಿ ಉತ್ಪನ್ನಗಳನ್ನು ಯಾವುದೇ ಮಾರುಕಟ್ಟೆಗೆ ಸಾಗಿಸುವುದಿಲ್ಲ, ಬದಲಾಗಿ ನಮ್ಮ ಮನೆಯಲ್ಲೇ ಮಾರಾಟ ನಡೆಸುವ ಮೂಲಕ ಗ್ರಾಹಕರಿಗೂ ಒಂದಿಷ್ಟು ಕಡಿಮೆ ದರದಲ್ಲಿ ರಾಸಾಯನಿಕ ರಹಿತ ಹಣ್ಣು ತರಕಾರಿಗಳು ದೊರೆಯುತ್ತದೆ, ಆ ನಿಟ್ಟಿನಲ್ಲಿ ನಮ್ಮ ಮನೆಯನ್ನು ಕೇಳಿಕೊಂಡು ಗ್ರಾಹಕರು ಬರುತ್ತಿದ್ದು, ಒಮ್ಮೆ ಬಂದವರು ನಿರಂತರವಾಗಿ ನಮ್ಮ ಉತ್ಪನ್ನ ಕರೀದಿಸಲು ಬರುತ್ತಿದ್ದಾರೆ ಎನ್ನುತ್ತಾರೆ.

ರಾಸಾಯನಿಕ ರಹಿತ ಹಣ್ಣು ತರಕಾರಿಗಳಿಗಾಗಿ ರವಿ ಶೇರಿಗಾರ್ ಇವರ ಮೊಬೈಲ್ ಸಂಖ್ಯೆ: 9611898641 ರನ್ನು ಸಂಪರ್ಕ ಮಾಡ ಬಹುದಾಗಿದೆ.