ಕಾವೇರಿ 2.0 ಹೆಸರಲ್ಲಿ ಮಂಗಳೂರಿಗರನ್ನು ವಂಚಿಸುತ್ತಿರುವ ನೋಂದಣಿ ಇಲಾಖೆ ದಿವ್ಯ ಮೌನಕ್ಕೆ ಶರಣಾದ ಜನಪ್ರತಿನಿಧಿಗಳು! ಮೌನದ ಹಿಂದಿನ (ಕಟ್ಟು) ಗುಟ್ಟೇನು?

ಕರ್ನಾಟಕ ರಾಜ್ಯದ ನೋಂದಣಿ ಇಲಾಖೆ ತನ್ನ ಬಂಗಾರದ ಮೊಟ್ಟೆ ಇಡುವ ಕೋಳಿಯನ್ನು ಮಂಗಳೂರಿನಲ್ಲಿ ಸಾಕಲು ಮುಂದಾಗುತ್ತಿದ್ದು, ಕೆಲವೇ ದಿನಗಳಲ್ಲಿ ಇಲ್ಲಿನ ಸಾರ್ವಜನಿಕರು ನೋಂದಣಿಗೆ ಸಂಬಂಧಪಟ್ಟು ಸಾಕಷ್ಟು ಪರದಾಟ ಅನುಭವಿಸಲು ಸಜ್ಜಾಗುತ್ತಿದ್ದಾರೆ. ಕಾವೇರಿ 2.0 ತತ್ರಾಂಶದ ಮೂಲಕ ತನ್ನ ಕಾಲ ಮೇಲೆಯೇ ಕಲ್ಲು ಹಾಕಿಕೊಳ್ಳಲು ಮುದ್ರಂಕ ಹಾಗೂ ನೋಂದಣಿ ಇಲಾಖೆ ಸಜ್ಜಾಗುತ್ತಿದೆ.

ನಾನು ಈ ಬರಹ ಬರೆಯುತ್ತಿರುವ ಉದ್ದೇಶ ಜಮೀನು ನೋಂದಣಿಗೆ ಸಂಬಂಧಪಟ್ಟಂತೆ ಇದೆ ಫೆಬ್ರವರಿ 13 ರಿಂದ ಮಂಗಳೂರು ತಾಲೂಕು ಉಪನೋಂದಣಿ ಕಚೇರಿಯಲ್ಲಿ ಅಳವಡಿಸಿ ಜಾರಿಗೊಳಿಸಲು ಸಜ್ಜಾಗಿರುವ ಕಾವೇರಿ 2.0 ಹಾಗೂ ಅದರ ಸಾಧಕ ಬಾಧಕಗಳ ಬಗ್ಗೆ.

ಹೇಳಿ ಕೇಳಿ ಸರಕಾರಗಳು ಯಾವುದೇ ಪಕ್ಷದ್ದು ಬರಲಿ, ಅದರ ಹೊಸ ಯೋಜನೆಗಳ ಪ್ರಯೋಗ ಮೊದಲ ಬಾರಿಗೆ ಆಗುವುದು ನಮ್ಮ ಮಂಗಳೂರಿನ ಮೇಲೆಯೇ. ಯಾಕೆಂದರೆ ಇಲ್ಲಿನವರು ಬುದ್ಧಿವಂತರು ಹೇಗಾದರೂ ಮಾಡಿ ಸುಧಾರಿಸಿಕೊಂಡು ಹೋಗುತ್ತಾರೆ. ಪ್ರಯೋಗದ ಫಲ ಸಕಾರಾತ್ಮಕವಾಗಿದ್ದರೆ ಈ ಯೋಜನೆ ಗಳನ್ನುಬೇರೆ ಕಡೆಗೆ ಅಳವಡಿಸಲು ದಾರಿ ದೀಪವಾಗುತ್ತದೆ, ಒಂದು ವೇಳೆ ನಕಾರಾತ್ಮಕವಾಗಿದ್ದರೆ, ಅದರ ಕಷ್ಟ ನಷ್ಟಗಳನ್ನು ಅನುಭವಿಸುವರು ಕೇವಲ “ಮಂಗಳೂರಿಗಲ್ವೇ” ಎನ್ನುವ ತಾತ್ಸಾರ ಧೋರಣೆಯೇ ಈ ಹೊಸ ವ್ಯವಸ್ಥೆಯನ್ನು ಮಂಗಳೂರಿಗೆ ತಂದು ನಿಲ್ಲಿಸಿದೆ.

ಸರಕಾರಕ್ಕೆ ಹಾಗೂ ಅಧಿಕಾರಿ ವರ್ಗಗಳಿಗೆ ಮಂಗಳೂರಿನ ಮೇಲೆ ಮೊದಲಿನಿಂದಲೂ ಒಂದು ಮಲತಾಯಿ ಧೋರಣೆ ಇದೆ. ಯಾವುದೇ ಉತ್ತಮ ಯೋಜನೆಗಳಿದ್ದರೆ ಅವುಗಳನ್ನು ತಮ್ಮ ತಮ್ಮ ಜಿಲ್ಲೆಗಳಿಗೆ ಮೀಸಲಿಟ್ಟು, ಜನ ಬವಣೆ ಅನುಭವಿಸಬಹುದಾದ ಏನೇ ಇದ್ದರೂ ಅದರ ಪ್ರಯೋಗಕ್ಕೆ ಮಂಗಳೂರು ಎಂಬ ಬಹು ದೊಡ್ಡ ಪ್ರಯೋಗಶಾಲೆ ಹಾಗೂ ಮಂಗಳೂರಿಗರ ರೂಪದಲ್ಲಿ “ಜಿನಿಯ ಪಿಗ್” ಇದೆ, ಎಂಬಂತಹ ಒಂದು ಧೋರಣೆಯನ್ನು ನಾವು ನೋಡುತ್ತಾ ಬಂದಿದ್ದೇವೆ. ಅದು ಇಲ್ಲಿನ “ಏಕ ವಿನ್ಯಾಸ” ದ ವಿಷಯ ಇರಬಹುದು ಹಾಗೂ “ನಮೂನೆ 9, 11ಎ” ಯ ವಿಷಯ ಇರಬಹುದು ಅಥವಾ ಹೇಳ ಹೆಸರಿಲ್ಲದಂತೆ ಮಿಂಚಿ, ಇಲ್ಲಿನ ಜನರನ್ನು ಸತಾಯಿಸಿ ಸತ್ತು ಹೋಗಿರುವ “ಪ್ರಾಪರ್ಟಿ ಕಾರ್ಡ್” ಇರಬಹುದು ಅಥವಾ ಈಗ ಈ-ಖಾತೆಯ ಹೆಸರಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಪ್ರಹಸನ ಇರಬಹುದು, ಅದಕ್ಕೆಲ್ಲಾ, ಮಂಗಳೂರೇ ಪ್ರಯೋಗ ಶಾಲೆ. ಈ ಹೊಸ ಹೊಸ ಯೋಜನೆಗಳು ಸಾಕಷ್ಟು ಅವಾಂತರಗಳು ಸೃಷ್ಟಿಸಿದ, ಅದರಿಂದ ಸಾಮಾನ್ಯ ಜನರು ಹತ್ತು ಹಲವು ಸಮಸ್ಯೆ ಅನುಭವಿಸಿರುವ ಉದಾಹರಣೆಗಳು ನಮ್ಮ ಕಣ್ಮುಂದೆ ಇದ್ದರೂ, ಇಲ್ಲಿನ ಜನ ಪ್ರತಿನಿಧಿಗಳು ಇನ್ನೂಶ್ರೀಮಂತರ ಮದುವೆ, ಮುಂಜಿ, ಹಣವಂತರ ಮನೆ ಮಠಗಳು, ಅಂಗಡಿಗಳನ್ನು ಉದ್ಘಾಟಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ.

ಇಲ್ಲಿನ ಅಧಿಕಾರಿಗಳು ಬಾಯಿ ಬಡಿದುಕೊಳ್ಳುವಂತೆ ಕಾವೇರಿ 2.0 ಒಂದು ಉತ್ತಮ ವ್ಯವಸ್ಥೆಯೇ ಆಗಿದ್ದರೆ ಆಧಾರ ಪ್ರಯೋಗ ಮಂಗಳೂರಿನಲ್ಲಿ ಆಗುವ ಬದಲು ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಮಾಡಬಹುದಿತ್ತಲ್ವೆ. ಅಲ್ಲಿ ಈ ವ್ಯವಸ್ಥೆಯ ಪ್ರಯೋಗದ ಮೇಲುಸ್ತುವಾರಿಗಾಗಿ ಸಾಫ್ಟವೆರ್ ಇಂಜಿನಿಯರ್ ಗಳು, ದೊಡ್ಡ ದೊಡ್ಡ ಇಲಾಖಾ ಅಧಿಕಾರಿಗಳು, ಮಂತ್ರಿವರ್ಯರೂ ಎಲ್ಲರೂ ಇದ್ದರಲ್ಲವೇ, ಹೀಗಿದ್ದೂ ಅದರ ಪ್ರಯೋಗ ಮಂಗಳೂರಿನಲ್ಲಿ ಯಾಕಾಗಿ ಆಗುತ್ತಿದೆ. ಅದೂ ಈ ಆರ್ಥಿಕ ವರ್ಷದ ಕೊನೆ ಸಮೀಪಿಸಿ ಜನ ತಮ್ಮ ವಹಿವಾಟುಗಳನ್ನು ದಡ ಮುಟ್ಟಿಸಲು ಪೇಚಾಡುತ್ತಿರುವಾಗ…

ಇನ್ನು ಈ ಕಾವೇರಿ 2.0 ತಂತ್ರಾಂಶದ ಬಗ್ಗೆನೇ ಮಾತನಾಡುವುದಾದರೆ, ಈ ತಂತ್ರಾಂಶ ಇನ್ನೂ ಕತ್ತಲೆ ಕೋಣೆಯಲ್ಲಿದೆ. ಅದರ ಸಾಧಕ ಬಾಧಕಗಳ ಪರಿಶೀಲನೆ ಇನ್ನಷ್ಟೇ ಆಗಬೇಕಾಗಿದೆ. ಅದು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ, ಅದರ ನಿಬಂಧನೆಗಳೇನು, ದಸ್ತಾವೇಜುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವಾಗ ತಪ್ಪಾಗಿದ್ದಲ್ಲಿ ಅದನ್ನು ಯಾವ ರೀತಿ ಸರಿಪಡಿಸಬಹುದು, ಅಪ್ಲೋಡ್ ಮಾಡುವ ದಸ್ತಾವೇಜುಗಳಲ್ಲಿ ಪಕ್ಷಕಾರರ ಸಹಿ ಇರಬೇಕೆ, ಬೇಡವೇ, ಒಂದು ವೇಳೆ ಸಹಿ ಬೇಡವೆಂದಿದ್ದರೆ ಸದ್ರಿ ಅಪ್ಲೋಡ್ ಮಾಡುವ ದಸ್ತಾವೇಜುಗಳಿಂದ ಏನು ಪ್ರಯೋಜನ, ಸಹಿ ಮಾಡಿ, ನೋಂದಣಿ ಆದ ದಸ್ತಾವೇಜನ್ನು, ಇನ್ನೊಮ್ಮೆ ಅಪ್ಲೋಡ್ ಮಾಡಬೇಕೆ, ಮಾಡಬೇಕಿದ್ದರೆ, ಈ ನೋಂದಣಿ ಪೂರ್ವ ಅಪ್ಲೋಡ್ ಇತ್ಯಾದಿಗಳು ಜನರಿಗೆ ಕಿರಿಕಿರಿಯಲ್ಲದೆ ಮತ್ತೇನು? ಇತ್ಯಾದಿ ಪ್ರಶ್ನೆಗಳಿಗೆ ಇಲಾಖೆಯಿಂದ ಈ ತನಕ ಯಾವುದೇ ಪ್ರತಿಕ್ರಿಯೆ ಇಲಾಖೆಯಿಂದ ಬಂದಿಲ್ಲ. ಬದಲಾಗಿ ನಾವೇನಿದ್ದರೂ ಈ ಹೊಸ ವ್ಯವಸ್ಥೆ ಜಾರಿ ಮಾಡಿಯೇ ತೀರುತ್ತೇವೆ ಎನ್ನುವ ಉಡಾಫೆಯ ಉತ್ತರ ಮಾತ್ರ ಇಲಾಖೆಯಿಂದ ಬರುತ್ತಿದೆ.

ಇವೆಲ್ಲಕ್ಕಿಂತ ಬಹು ಮುಖ್ಯವಾದ ಸಮಸ್ಯೆ ಬೇರೆಯೊಂದಿದೆ. ಪ್ರಸಕ್ತ ನಾವೇ ಆನ್ಲೈನ್ ಮೂಲಕ ಚಲನ್ ಸೃಜಿಸಿ ಸರಕಾರದ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸುವ ಅತ್ಯುತ್ತಮ ವ್ಯವಸ್ಥೆ ಇದೆ. ಇದರ ಪ್ರಯೋಜನವೇನೆಂದರೆ ಪಕ್ಷಕಾರರು, ನೋಂದಣಿಗಿಂತ ಸಾಕಷ್ಟು ಮುಂಚಿತವಾಗಿ ಸರಕಾರದ ಖಜಾನೆಗೆ ಮೊತ್ತವನ್ನು ಜಮೆ ಮಾಡುವುದರಿಂದ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಮೊತ್ತ ಅದಾಗಲೇ ಸರಕಾರದ ಖಜಾನೆಯಲ್ಲಿ ಜಮೆಯಾಗಿರುತ್ತದೆ. ಈ ರೀತಿ ಜಮೆ ಮಾಡಿದ ಮೊತ್ತಕ್ಕೆ ನಮಗೆ ರೆಮಿಟ್ಟೆರ್ ಕಾಪಿ ಅಂತ ದಾಖಲೆ ನೀಡಲಾಗುತ್ತದೆ. ಇದರಿಂದ ಸರಕಾರ ಹಾಗೂ ಸಾರ್ವಜನಕರಿಬ್ಬರೂ ಒಂದು ರೀತಿಯ ವಿನ್ ವಿನ್ ಸಿಚುವೇಶನ್ ನಲ್ಲಿರುತ್ತಾರೆ. ಆದರೆ ಈಗ ಹೊಸದಾಗಿ ಕಾವೇರಿ 2.0 ಅನುಷ್ಠಾನ ಗೊಂಡಾಗ ಎಲ್ಲ ಪಾವತಿ ಪ್ರಕ್ರಿಯೆ ಆರಂಭ ಆಗುವುದು, ನಾವು ತಯಾರಿಸಿ ಅಪ್ಲೋಡ್ ಮಾಡಿದ ದಾಖಲೆ ಸರಿ ಇದೆಯೆಂದು ಸಂಪಂಧಪಟ್ಟ ಉಪನೋಂದಣಾಧಿಕಾರಿ ಗ್ರೀನ್ ಫ್ಲಾಗ್ ನೀಡಿದ ಬಳಿಕವೇ. ಅದರರ್ಥ ಸರಿಯಾದ ದಸ್ತಾವೇಜುಗಳು ಅಪ್ಲೋಡ್ ಆಗುವ ತನಕ ಸರಕಾರದ ಖಜಾನೆಯಲ್ಲಿ ಈ ಮೊದಲು ಜಮೆಯಾಗುತ್ತಿದ್ದಂತೆ ಮುದ್ರಂಕ ಶುಲ್ಕ ಜಮೆ ಆಗುವುದಿಲ್ಲ. ಇದರಿಂದ ಸರಕಾರಕ್ಕೆ ತಮ್ಮ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಫಂಡ್ ನ ಕೊರತೆ ಕಾಡಬಹುದು. ಸರಕಾರದ ಖಜಾನೆದ್ದು ಈ ಗತಿಯಾದರೆ, ಜನರ ಕಷ್ಟಗಳು ಬೇರೆಯದ್ದೇ. ಯಾಕೆಂದರೆ ಕಾವೇರಿ 2.0 ದಲ್ಲಿ ಮುದ್ರಂಕ ಶುಲ್ಕ ಹಾಗೂ ನೋಂದಣಿ ಶುಲ್ಕ ಇತ್ಯಾದಿ ಪಾವತಿಗಳನ್ನು, ಸಂಬಂಧ ಪಟ್ಟ ಉಪನೋಂದಣಾಧಿಕಾರಿ ದೃಢೀಕರಿಸಿದ ಬಳಿಕ ‘ನೆಟ್ಬ್ಯಾಂಕಿಂಗ್” ವ್ಯವಸ್ಥೆ ಮೂಲಕವೇ ಪಾವತಿ ಮಾಡತಕ್ಕದ್ದು. ಈ ರೀತಿ ಮಾಡಿದ ಪಾವತಿಗಳಿಗೆ ಪಕ್ಷಕಾರರಿಗೆ ಯಾವುದೇ ದಾಖಲೆಗಳನ್ನು ನೀಡಲಾಗುವುದಿಲ್ಲ ಹಾಗೂ ಪಾವತಿ ಮಾಡಿದ ಮೊತ್ತವನ್ನು ‘ತಪ್ಪು ಪಾವತಿ’, ‘ದಸ್ತಾವೇಜು ನೋಂದಣಿಯನ್ನು ಪಕ್ಷಕಾರರು ರದ್ಧು ಪಡಿಸಿದ’ ಸಂದರ್ಭದಲ್ಲಿ ಅಥವಾ ಇನ್ನಿತರ ಯಾವುದೇ ಸಂದರ್ಭದಲ್ಲಿ ನೋಂದಣಿ ಜರಗದಿದ್ದಲ್ಲಿ, ಹಿಂತಿರಿಗಿಸುವ ಅವಕಾಶ ಇಲ್ಲವೇ ಇಲ್ಲ. ಇದರಿಂದಾಗಿ ಸಾಕಷ್ಟು ಜನರು ತಮ್ಮ ಹಣವನ್ನುವಿನಾಕಾರಣ ಕಳೆದುಕೊಳ್ಳಬೇಕಾಗುತ್ತದೆ.

ಇನ್ನು ಈ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಹೇಳುವುದಾದರೆ, ಸಾಕಷ್ಟು ಜನರಿಗೆ ನೆಟ್ ಬ್ಯಾಂಕಿಂಗ್ ಸೌಲಭ್ಯ ಇರುವುದಿಲ್ಲ ಹಾಗೂ ಬಹುತೇಕರಿಗೆ ನೆಟ್ ಬ್ಯಾಂಕಿಂಗ್ ಎಂದರೆ ಏನೆಂದೇ ತಿಳಿಯದು. ಹೀಗಿರುವಾಗ ಬಡ ಕೃಷಿಕನೊಬ್ಬ ತನ್ನ ಜಾಮೀನು ಮಾರಿ ತನ್ನ ಮಗಳಿಗೆ ಮದುವೆ ಮಾಡಲು ಇಚ್ಚಿಸಿದಲ್ಲಿ, ಅವನು ಮುದ್ರಂಕ ಶುಲ್ಕ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿ ಜಮೀನು ನೋಂದಣಿ ಮಾಡಿಕೊಂಡಾನೇ? ಬ್ಯಾಂಕ್ ಸಾಲದ ಬಗ್ಗೆ ದಾಖಲೆ ಬರೆಯಿಸಿ ನೋಂದಣಿ ಮಾಡಿಸಿಕೊಟ್ಟಾನೆ?

ಈಗಿನ ಚಲನ್ ವ್ಯವಸ್ಥೆಯಲ್ಲೇ ಸಾಕಷ್ಟು ಜನರು ತನ್ನ ಹಣ ಕಳೆದುಕೊಂಡ ಉದಾಹರಣೆಗಳಿವೆ. ಆದರೆ ಮೇಲೆ ಈ ನೆಟ್ ಬ್ಯಾಂಕಿಂಗ್ ಪಾವತಿ ಜನರಿಗೆ ಹೊಸ ತಲೆನೋವು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಯಾವುದೇ ಹೊಸ ವ್ಯವಸ್ಥೆ ಆರಂಭಿಸುವ ಮೊದಲು ಜನರಿಗೆ ಪ್ರಾತ್ಯಕ್ಸಿಕೆಗಳ ಮೂಲಕ ಅರಿವು ನೀಡಬೇಕಾಗುತ್ತದೆ. ಆದರೆ ಕಣ್ಣಿದ್ದು ಕುರುಡಾಗಿರುವ ನಮ್ಮ ಮುದ್ರಂಕ ಇಲಾಖೆಗೆ ಈ ಜ್ಞಾನ ಇಲ್ಲದೆ ಹೋಗಿದ್ದು ಅಚ್ಚರಿಯೇ ಸರಿ. ದಸ್ತಾವೇಜು ಪ್ರಕ್ರಿಯೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿರುವ ಬಹುತೇಕ ವಕೀಲರುಗಳಿಗೆ, ದಸ್ತಾವೇಜು ಬರಹಗಾರರ ಬಳಿ ಸ್ಕ್ಯಾನ್ ಅಪ್ಲೋಡ್ ಇತ್ಯಾದಿಗಳಿಗೆ ಬೇಕಾದ ಪರಿಕರಗಳು, ವ್ಯವಸ್ಥೆಗಳು, ಕಚೇರಿ ವ್ಯವಸ್ಥೆ ಇತ್ಯಾದಿಗಳಿಲ್ಲ. ಅದರಲ್ಲೂ ವಿಶೇಷವಾಗಿ ಯುವ ನ್ಯಾಯವಾದಿಗಳಿಗೆ ಇದರಿಂದ ಸಾಕಷ್ಟು ತೊಂದರೆಗಳಾಗುತ್ತವೆ.

ಈ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆ ಇಷ್ಟೇ. ನೀವು ಯಾವುದೇ ಹೊಸ ವ್ಯವಸ್ಥೆ ಜಾರಿಗೊಳಿಸುವುದ್ದರೆ ಅದಕ್ಕೆ ಸೂಕ್ತ ಮುಂಜಾಗೃತೆ ವಹಿಸಿ, ಜನರಿಗೆ ಪ್ರಾತ್ಯಕ್ಷಿಕೆಗಳು, ವರ್ಕ್ ಶಾಪ್ ಗಳ ಮೂಲಕ ಸೂಕ್ತ ಮಾಹಿತಿ ನೀಡಿ, ಪ್ರಾಯೋಗಿಕ ನೆಲೆಯಲ್ಲಿ ಯಾವುದನ್ನೇ ಅನುಷ್ಠಾನ ಗೊಳಿಸುವುದಿದ್ದರೂ ಅದನ್ನು ಬೆಂಗಳೂರಿನಂತಹ ರಿಸೋರ್ಸ್ ಹಬ್ ಗಳಲ್ಲಿ ಅಥವಾ ಅತೀ ಕಡಿಮೆ ಕೆಲಸವಿರುವ ಕಡೆ ಜಾರಿಗೆ ತನ್ನಿ. ಹಳೆಯ ಪ್ರಕ್ರಿಯೆಯ ಜತೆ ಜತೆಗೆ ಹೊಸತನ್ನು ಪರಿಚಯಿಸಿ, ಹಾಗೂ ಹೊಸ ವ್ಯವಸ್ಥೆಯ ಸಾಧಕ ಬಾಧಕಗಳನ್ನು ಮುನ್ನಡೆಸಿ ಎನ್ನುವುದೇ ನಾನಮ್ಮ ಬೇಡಿಕೆ.

ಆದರೆ ನಮ್ಮ ಬೇಡಿಕೆಯನ್ನು ಆಲಿಸುವವರು ಯಾರಾದರೂ ಇದ್ದಾರೆಯೇ?

ಲೇಖನ : ಇಸ್ಮಾಯಿಲ್ಎಸ್. ನ್ಯಾಯವಾದಿ ಮಂಗಳೂರು

Related Posts

Leave a Reply

Your email address will not be published.