ಕೇರಳದ ಅನನ್ಯತೆ ಅರಸಿ ಗ್ರಾಮಗಳ ಪ್ರವಾಸದಲ್ಲಿರುವ ಯುವಕರು
ಮಂಜೇಶ್ವರ: ಜಗತ್ತಿನ ಮಲಯಾಳಿಗಳಿಗೆ ಕೇರಳದ ಬಗ್ಗೆ ವಿಭಿನ್ನ ಅಭಿವ್ಯಕ್ತಿ ನೀಡುವ ಹಾಗೂ ಕೇರಳವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಲಪ್ಪುರಂ ಜಿಲ್ಲೆಯ ಇಬ್ಬರು ಯುವಕರು ಕೇರಳದ ಅನನ್ಯತೆ ಅರಸಿ ಗ್ರಾಮಗಳ ಪ್ರವಾಸದ ಹೆಸರಿನಲ್ಲಿ ಕೇರಳದ ಉತ್ತರ ಭಾಗವಾದ ಗಡಿನಾಡ ಪ್ರದೇಶಕ್ಕೆ ತಲುಪಿದ್ದಾರೆ. ಕೇರಳ ಎಂದರೇನು ಎಂಬುದನ್ನು ತಿಳಿದುಕೊಳ್ಳಲು ಹಾಗೂ ಅಲ್ಲಿನ ಭಾಷೆ, ಸಂಸ್ಕೃತಿ, ಅಭಿರುಚಿ, ವಿವಿಧ ವ್ಯಾಪಾರ, ಕೃಷಿ, ಪ್ರವಾಸೋದ್ಯಮ ಮತ್ತಿತರ ಅಪರೂಪದ ಅನುಭವಗಳನ್ನು ಅನುಭವಿಸಲು ಈ ಪ್ರವಾಸ ಅವಕಾಶ ಕಲ್ಪಿಸುತ್ತದೆ ಎಂದು ಮಲಪ್ಪುರಂ ಮೂಲದ ಸದಾಕತುಲ್ಲಾ ಹಾಗೂ ನಿಯಾಸ್ ಎಂಬೀ ಯುವಕರು ಹೇಳುತಿದ್ದಾರೆ.
ಕೊಚ್ಚು ಕೇರಳದ ಒಳ ಗ್ರಾಮಗಳಲ್ಲಿ ಪ್ರವಾಸ ನಡೆಸುವ ಉದ್ದೇಶವನ್ನು ಇಟ್ಟು ಕೊಂಡಿರುವ ಇವರು ಕಾಸರಗೋಡಿನಿಂದ ತಿರುವನಂತಪುರದವರೆಗೆ ಹಳ್ಳಿಗಳಲ್ಲಿ ಸಂಚರಿಸುವಾಗ ಕಂಡುಬರುವ ಅನೇಕ ಬಟ್ಟೆ ವ್ಯಾಪಾರ, ಉತ್ಪನ್ನಗಳು ಮತ್ತು ಹಲವಾರು ಸೇವೆಗಳ ಬಗ್ಗೆ ಜನರಿಗೆ ಅರಿವು ನೀಡುವ ಉದ್ದೇಶದೊಂದಿಗೆ ಈ ಜೈತ್ರಯಾತ್ರೆ ಆರಂಭಿಸಿದ್ದಾರೆ.
ಇಡೀ ಕೇರಳ ರಾಜ್ಯದ ಪ್ರತೀ ಹಳ್ಳಿಗಳಲ್ಲಿ ಸಂಚರಿಸಿ ಅಲ್ಲಿನ ವಿಸ್ಮಯಕಾರಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಇದಾಗಿದೆ. ಈ ಪ್ರಯಾಣವು ಕಾಸರಗೋಡಿನಿಂದ ಆರಂಭಗೊಂಡು ತಿರುವನಂತಪುರವನ್ನು ತಲುಪಲು ಸುಮಾರು ಎರಡು ವರ್ಷಗಳು ಬೇಕಾಗಬಹುದೆಂದು ಇವರ ಹೇಳಿಕೆ. ಪ್ರತಿ ಪಂಚಾಯಿತಿ ಹಾಗೂ ಪಂಚಾಯಿತಿಯ ಪ್ರತಿ ವಾರ್ಡ್‍ಗಳಲ್ಲಿ ಸಂಚರಿಸಿ ಅಲ್ಲಿನ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಜನರಿಗೆ ತಲುಪಿಸುವ ಪ್ರಯತ್ನಕ್ಕೆ ಚಾಲನೆ ದೊರಕಿತು . ಇದರ ಉದ್ಘಾಟನೆಯು ಮಂಜೇಶ್ವರಂ ಗ್ರಾಮ ಪಂಚಾಯತ್‍ನ 1 ನೇ ವಾರ್ಡ್‍ನ ಕಣ್ವತೀರ್ಥದಲ್ಲಿ ನಡೆಯಿತು. ಮಂಜೇಶ್ವರಂ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಿನ್ ಲವಿನಾ ಮೊಂತೆರೊ ಉದ್ಘಾಟಿಸಿದರು. ಉಪಾಧ್ಯಕ್ಷ ಮುಹಮ್ಮದ್ ಸಿದ್ದೀಕ್ ಅಧ್ಯಕ್ಷತೆ ವಹಿಸಿದ್ದರು. ಜನಪ್ರತಿನಿಧಿಗಳಾದ ಯಾದವ ಬಡಾಜೆ, ಲಕ್ಷ್ಮಣ, ರಾಧಾ ಸೇರಿದಂತೆ ವಿವಿಧ ರಾಜಕೀಯ, ಸಾಮಾಜಿಕ ಮುಖಂಡರು ಪಾಲ್ಗೊಂಡರು