ಮಂಗಳೂರು : ಬಲ್ಮಠ ಕೆ.ಟಿ.ಸಿ ಆವರಣದಲ್ಲಿ ಕಿಟ್ಟೆಲ್ ಪ್ರತಿಮೆ ಅನಾವರಣ

ಕಿಟ್ಟೆಲ್ ಅವರ ಕನ್ನಡ ಸಾಹಿತ್ಯದ ಸಮಗ್ರ ಗ್ರಂಥ ಪ್ರಕಟಿಸಲು ಒತ್ತಾಯಕನ್ನಡದ ಪ್ರಥಮ ಶಬ್ದಕೋಶವನ್ನು ರೂಪಿಸಿದ ರೆವರೆಂಡ್ ಫರ್ಡಿನೆಂಡ್ ಕಿಟೆಲ್ ಅವರ ಪ್ರತಿಮೆಯನ್ನು ಮಂಗಳೂರಿನ ಕರ್ನಾಟಕ ಥಿಯೋಲಾಜಿಕಲ್ ಕಾಲೇಜು ಆವರಣದಲ್ಲಿ ಶನಿವಾರದಂದು ಕಿಟೆಲ್ ಅವರ ಮರಿಮಗಳು ಜರ್ಮನಿಯ ಅಲ್ಮುಥ್ ಬಾರ್ಬರಾ ಮೈಯರ್ ಹಾಗೂ ಕಿಟ್ಟೆಲ್ ಅವರ ಮರಿ ಮರಿ ಮಗ ಈವ್ ಪ್ಯಾಟ್ರಿಕ್ ಮೈಯರ್ ಅವರು ಅವರು ಅನಾವರಣಗೊಳಿಸಿದರು.

ನೂರ ಐವತ್ತು ವರ್ಷಗಳ ಹಿಂದೆ ಅನೇಕ ಕನ್ನಡ ಕೃತಿಗಳ ರಚನೆ , ಗ್ರಂಥ ಸಂಪಾದನೆ ಹಾಗೂ ಮೊದಲ ಕನ್ನಡ ಶಬ್ದಕೋಶ ರಚನೆಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪೂರ್ವವಾದ ಕೊಡುಗೆಗಳನ್ನು ನೀಡಿದ ಫರ್ಡಿನೆಂಡ್ ಕಿಟೆಲ್ ಅವರ ಪ್ರತಿಮೆಯನ್ನು ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರತಿಷ್ಠೆ ಮಾಡಲಾಗಿದ್ದು, ಈ ಅಪೂರ್ವ ಕಾರ್ಯಕ್ರಮಕ್ಕೆ ನೂರಾರು ಮಂದಿ ಕನ್ನಡ ಅಭಿಮಾನಿಗಳು , ಜರ್ಮನಿಯ ಸರಕಾರದ ಪ್ರತಿನಿಧಿಗಳು, ಕಿಟೆಲ್ ಬಂಧುಗಳು ಸಾಕ್ಷಿಯಾದರು.


ಪ್ರತಿಮೆಯನ್ನು ಅನಾವರಣ ಮಾಡಿ ಮಾತನಾಡಿದ ಕಿಟ್ಟೆಲ್ ಅವರ ಮರಿಮಗಳು ಅಲ್ಮುಥ್ ಬಾರ್ಬರಾ ಅವರು ಇದೊಂದು ತುಂಬಾ ಭಾವನಾತ್ಮಕ ಕಾರ್ಯಕ್ರಮವಾಗಿದೆ. ಕಿಟ್ಟೆಲ್ ಅವರ ಕುಟುಂಬದ ಪರವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿಲು ತುಂಭಾ ಅಭಿಮಾನ ಹಾಗೂ ಹೆಮ್ಮೆ ಇದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಕಿಟ್ಟೆಲ್ ಅವರ ಮರಿಮರಿ ಮಗ ಈವ್ ಪ್ಯಾಟ್ರಿಕ್ ಮೈಯರ್ ಅವರು, ಕನ್ನಡ ಭಾಷೆಗೆ ರೆವರೆಂಡ್ ಕಿಟ್ಟೆಲ್ ಅವರು ನೀಡಿದ ಕೊಡುಗೆ ಅನನ್ಯವಾದುದು. ಅವರ ಬಗ್ಗೆ ಕರ್ನಾಟಕದ ಜನತೆ ಹೊಂದಿರುವ ಅಭಿಮಾನಕ್ಕೆ ನಾವು ಚಿರಋಣಿಗಳಾಗಿದ್ದೇವೆ ಎಂದು ಹೇಳಿದರು. ಕಿಟ್ಟೆಲ್ ಅವರು ಬಳಸುತ್ತಿದ್ದ ಕೆಲವು ಪರಿಕರಗಳು , ವಸ್ತುಗಳು ಜರ್ಮನಿಯಲ್ಲಿದ್ದು ಅದನ್ನು ಕರ್ನಾಟಕಕ್ಕೆ ಹಸ್ತಾಂತರಿಸುವ ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಂಪಿ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಅವರು ಕಿಟ್ಟೆಲ್ ಅವರು ಸಾಹಿತ್ಯಿಕ ಕೊಡುಗೆಗಳ ಬಗ್ಗೆ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಕಿಟ್ಟೆಲ್ ಅವರ ಕೊಡುಗೆ ಅನನ್ಯವಾಗಿದ್ದು, ಅವರು ರೂಪಿಸಿದ ಕನ್ನಡ ಶಬ್ದಕೋಶಕ್ಕೆ ಪರ್ಯಾಯವಾಗಿ ಇನ್ನೊಂದು ಶಬ್ದಕೋಶವನ್ನು ನಮಗೆ ಇನ್ನೂ ರೂಪಿಸಲು ಸಾಧ್ಯವಾಗಿಲ್ಲ , ಆ ಕಾರಣಕ್ಕೆ ಕಿಟ್ಟೆಲ್ ಅವರು ಅಗ್ರಪಂಕ್ತಿಯ ಕನ್ನಡದ ಸಾಧಕರಾಗಿ ನಿಲ್ಲುತ್ತಾರೆ ಎಂದು ಹೇಳಿದರು. ಮಂಗಳೂರಿನಲ್ಲಿ ಸುದೀಘ್ರಕಾಲ ಓಡಾಡಿ ಸಾಹಿತ್ಯ ಸೇವೆ ಮಾಡಿದ ಕಿಟ್ಟೆಲ್ ಅವರ ನೆನಪಿಗಾಗಿ ಮಂಗಳೂರಿನ ಪ್ರಮುಖ ರಸ್ತೆಯೊಂದಕ್ಕೆ ಕಿಟ್ಟೆಲ್ ಅವರ ಹೆಸರನ್ನು ಇಡುವ ಮೂಲಕ ಮಂಗಳೂರಿನ ಜನತೆ ಕಿಟ್ಟೆಲ್ ಅವರಿಗೆ ಗೌರವ ಸಲ್ಲಿಸಬೇಕೆಂದು ವಿವೇಕ ರೈ ಅವರು ಆಗ್ರಹಿಸಿದರು. ಕಿಟ್ಟೆಲ್ ಅವರ ಸಮಗ್ರ ಸಾಹಿತ್ಯ ಗ್ರಂಥಗಳ ಪ್ರಕಟವಾಗುವಂತಾಗಬೇಕು, ಕಿಟ್ಟೆಲ್ ರೂಪಿಸಿದ ಶಬ್ದಕೋಶದ ಪುನರ್ ಮುದ್ರಣವಾಗಬೇಕೆಂದು ರೈ ಅವರು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಜರ್ಮನ್ ಸರಕಾರದ ಕೌನ್ಸಿಲ್ ಜನರಲ್ ಫೆಡ್ರಿಕ್ ಬಿರ್ಗೆಲೆನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಈ ಕಾರ್ಯಕ್ರಮವು ಜರ್ಮನ್ ಹಾಗೂ ಕರ್ನಾಟಕದ ಸೌಹಾರ್ದ ಭಾಂದವೈದ ಪ್ರತೀಕವಾಗಿದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಟಿ.ಸಿ ಪ್ರಾಂಶುಪಾಲ ಡಾ.ಎಚ್. ಎಂ. ವಾಟ್ಸನ್ ಅವರು ಮಾತನಾಡಿ 175 ನೇ ವರ್ಷ ಪೂರೈಸಿದ ಕೆ.ಟಿ.ಸಿ ಸಂಸ್ಥೆಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು ಎಂದು ಹೇಳಿದರು. ಇದೇ ವೇಳೆ ಡಾ.ಎ.ವಿ.ನಾವಡ ಅವರು ಕಿಟ್ಟೆಲ್ ಅವರ ಬಗ್ಗೆ ಬರೆದ ಕೃತಿಗಳನ್ನು ಕಿಟ್ಟೆಲ್ ಅವರು ಕುಟುಂಬಿಕರಿಗೆ ಡಾ. ಎಚ್. ಎಂ. ವಾಟ್ಸನ್ ಅವರು ಗೌರವ ಕಾಣಿಕೆಯಾಗಿ ನೀಡಿದರು.
ಇದೇ ಸಂದರ್ಭದಲ್ಲಿ ಪ್ರತಿಮೆಯನ್ನು ನಿರ್ಮಿಸಿದ ಎ.ಎಂ. ಫೆರ್ನಾಂಡೀಸ್ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ಬೆಂಗಳೂರಿನ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನ ಪ್ರೊಫೆಸರ್ ಡಾ.ಗುಡ್ರುನ್ ಲ್ಯೊವ್ನರ್ , ಕನ್ನಡ ಸಾಹಿತ್ಯ ಪರಿಷತ್ ಜಿಲಾ ಅಧ್ಯಕ್ಷ ಡಾ. ಎಂ. ಶ್ರೀನಾಥ್ , ಕೆ.ಟಿ.ಸಿ ನಿವೃತ್ತ ಪ್ರಾಂಶುಪಾಲ ಡಾ.ಸಿ.ಎಲ್. ಪುರ್ಟಾಡೋ , ಕನ್ನಡ ವಿದ್ವಾಂಸ , ಡಾ. ಎ.ವಿ.ನಾವಾಡ ಉಪಸ್ಥಿತಿರಿದ್ದರು.
ಕಾಲೇಜಿನ ಪ್ರೊಫೆಸರ್ ಡಾ. ಎಫ್. ಅನಿಲ್ ಕುಮಾರ್ , ಸಹಾಯಕ ಪ್ರಾಧ್ಯಾಪಕ ಬೈಲ ಚೆನ್ನಕೇಶವಲು, ಡಾ. ಕ್ರಿಶ್ಟೋಫರ್ ವಿಕ್ಟರ್ ಜಾರ್ಜ್ ಕಾರ್ಯಕ್ರಮ ನಿರ್ವಹಿಸಿದರು.

Related Posts

Leave a Reply

Your email address will not be published.