ಮೂಡುಬಿದಿರೆ: ಕೊಡ್ಯಡ್ಕ ಜಯರಾಮ ಹೆಗ್ಡೆ ನಿಧನ

ಅನಿವಾಸಿ ಉದ್ಯಮಿ, ಹೊಸನಾಡು ಕೊಡ್ಯಡ್ಕ ಶ್ರೀದೇವೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸ್ಥಾಪಕ ಮತ್ತು ಆಡಳಿತ ಮೊಕ್ತೇಸರ ಡಾ. ಕೊಡ್ಯಡ್ಕ ಜಯರಾಮ ಹೆಗ್ಡೆ (73) ಅನಾರೋಗ್ಯದಿಂದ ನ.23, ಮಂಗಳವಾರ ಮಧ್ಯಾಹ್ನ ಮೂಡುಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ ನಿಧನ ಹೊಂದಿದರು. ಪತ್ನಿ, ಪುತ್ರ , ಪುತ್ರಿಯನ್ನು ಅವರು ಅಗಲಿದ್ದಾರೆ. 23ನೇ ವಯಸ್ಸಿನಲ್ಲಿ ಮಸ್ಕತ್ ಗೆ ತೆರಳಿ ಇಲೆಕ್ಟ್ರಿಕಲ್ ಹಾರ್ಡ್ ವೇರ್ ಶೋರೂಮ್ ಆರಂಭಿಸಿದ್ದರು. ನಂತರ ಹೋಟೇಲ್ ಉದ್ಯಮಕ್ಕೆ ಕಾಲಿರಿಸಿ ಯಶಸ್ವಿ ಉದ್ಯಮಿ ಎನಿಸಿದರು.

1996ರಲ್ಲಿ ಕೊಡ್ಯಡ್ಕದಲ್ಲಿ ಶ್ರೀದೇವೀ ಅನ್ನಪೂರ್ಣೇಶ್ವರಿ ದೇವಸ್ಥಾನವನ್ನು ಕಟ್ಟಿಸಿ, ಅದನ್ನೊಂದು ಧಾರ್ಮಿಕ ಮಾತ್ರವಲ್ಲ ಪ್ರವಾಸೀ ಆಕರ್ಷಣೆಯ ತಾಣವಾಗಿ, ಶಿಸ್ತು, ಸೌಂದರ್ಯ ಪ್ರಜ್ಞೆಯ ಆರಾಧನಾ ಕೇಂದ್ರವನ್ನಾಗಿ ರೂಪಿಸಿದರು. ಬೃಹತ್ ಆಂಜನೇಯ ಶಿಲ್ಪ, ಪುರಂದರ ದಾಸ, ಸಾಯಿಬಾಬಾ ಮಂದಿರಗಳು, ದೇವಸ್ಥಾನದ ಪಕ್ಕ ದಲ್ಲಿ ಅಯ್ಯಪ್ಪ ಸನ್ನಿಧಿ, ಒಳಗಡೆ ಪ್ರಧಾನ ಅನ್ನಪೂರ್ಣೇಶ್ವರಿ ದೇವೀ ಅಲ್ಲದೆ ಗಣಪತಿ, ಆಂಜನೇಯ, ಸೋಮೇಶ್ವರ ಗುಡಿಗಳು, ನವಗ್ರಹ ಮಂಟಪ ಸ್ಥಾಪನೆಗೊಂಡಿದ್ದವು. ಸುಸಜ್ಜಿತ ಅತಿಥಿಗೃಹ, ಎರಡು ಸಭಾಂಗಣಗಳು ನಿರ್ಮಾಣಗೊಂಡಿದ್ದವು. ಕ್ಷೇತ್ರದಲ್ಲಿ ಹಲವಾರು ಬಾರಿ ನಾಗಮಂಡಲೋತ್ಸವಗಳು ನಡೆದಿವೆ. ವಿದೇಶೀ ವಿ.ವಿ.ಯೊಂದರ ಗೌರವ ಡಾಕ್ಟರೇಟ್ ಗೂ ಅವರು ಪಾತ್ರರಾಗಿದ್ದರು. ನಿತ್ಯ ಅನ್ನದಾನ, ಪರಿಸರದಲ್ಲಿ ಹೂದೋಟ, ಆಕರ್ಷಕ ಶಿಲ್ಪಗಳು, ನೀರಿನೊತ್ತಡದಲ್ಲಿ ತಿರುಗುವ ಶಿಲಾಗೋಳ ಹೀಗೆ ಹಲವಾರು ಆಕರ್ಷಣೆಯ ಅಂಶಗಳನ್ನು ಹೊಂದಿರುವ ಕೊಡ್ಯಡ್ಕ ಕ್ಷೇತ್ರದಿಂದ ಕೆಜಿಎಫ್ ಗೆ ಸರಕಾರಿ ಬಸ್ಸಿನ ವ್ಯವಸ್ಥೆ ಇದೆ. ಜಯರಾಮ ಹೆಗ್ಡೆ ಅವರು ಹೆಗ್ಗಡೆ ಸಮಾಜದ ಮುಂದಾಳು, ದಾನಿಯೂ ಆಗಿದ್ದು, ಇವರ ಮುಂದಾಳತ್ವದಲ್ಲಿ ಕೋಟೆಬಾಗಿಲು ವೀರಮಾರುತಿ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಲಾಗಿತ್ತು. ಇತರ ಪುರಾತನ ಕ್ಷೇತ್ರಗಳು, ಸಮುದಾಯಗಳಿಗೂ ಅವರು ಯಥಾಶಕ್ತಿ ಪ್ರೋತ್ಸಾಹಕರಾಗಿದ್ದರು. ಬೆಂಗಳೂರಿನಲ್ಲು ಹೋಟೆಲ್ ಉದ್ಯಮಕ್ಕೆ ಕಾಲಿರಿಸಿದ ಇವರು ಪುತ್ರ ವೈಭವ್ ಹೆಗ್ಡೆಯೊಂದಿಗೆ ಕೆಲವು ವರ್ಷಗಳ ಹಿಂದೆ ಅಶ್ವತ್ಥಪುರದಲ್ಲಿ ದಿ ಎಸ್ಟೇಟ್ ರೆಸಾರ್ಟ್ ಉದ್ಯಮವನ್ನು  ಆರಂಭಿಸಿದ್ದರು.

Related Posts

Leave a Reply

Your email address will not be published.