ಕೊಲ್ಯ : ಯುವತಿ ಸಂಶಯಾಸ್ಪದ ರೀತಿಯಲ್ಲಿ ಸಾವು

ಉಳ್ಳಾಲ: ಯುವತಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿ ಬಾಡಿಗೆ ಮನೆಯಲ್ಲಿ ನಡೆದಿದ್ದು, ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದರೂ ಬಾಯಿಗೆ ಬಟ್ಟೆಯನ್ನು ಗಟ್ಟಿಯಾಗಿ ಕಟ್ಟಿರುವುದು ಕೊಲೆ ಸಂಶಯ ವ್ಯಕ್ತಪಡಿಸಿದೆ.

ಛತ್ತೀಸಗಢ ಮೂಲದ ಸರಿತಾ ವರ್ಮ(23) ನಿಗೂಢ ರೀತಿಯಲ್ಲಿ ಸಾವನ್ನಪ್ಪಿದಾಕೆ. ಇಬ್ಬರು ಸಹೋದರರು ಹಾಗೂ ಅತ್ತಿಗೆ ಜೊತೆ ಸರಿತಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಜ.30 ರಂದು ಸಂಜೆ ಪ್ರಕರಣ ಬೆಳಕಿಗೆ ಬಂದಿತ್ತು. ಘಟನೆ ವೇಳೆ ಸಹೋದರರಿಬ್ಬರು ಕೆಲಸಕ್ಕೆ ತೆರಳಿದ್ದರೆ, ಅತ್ತಿಗೆ ಆಸ್ಪತ್ರೆಗೆ ತೆರಳಿದ್ದರು. ಬಾಡಿಗೆ ಮನೆ ಮಾಲೀಕರು ವೃದ್ದರಾಗಿದ್ದು ಅಸೌಖ್ಯದಿಂದಿದ್ದಾರೆ. ಕೆಳಗಿನ ಅಂತಸ್ತಿನಲ್ಲಿ ಮಾಲೀಕರಿದ್ದರೆ, ಮೇಲಿನ ಅಂತಸ್ತಿನಲ್ಲಿ ಬಾಡಿಗೆ ಕುಟುಂಬ ವಾಸ್ತವ್ಯವಿತ್ತು.ಸರಿತಾ ವರ್ಮ ವಿಶೇಷ ಚೇತನರಾಗಿದ್ದು, ಬಾಯಿ ಮತ್ತು ಕಿವಿ ಕೇಳದ ಸ್ಥಿತಿಯಲ್ಲಿದ್ದರು‌.

ಸಾವಿನಲ್ಲಿ ಸಂಶಯ: ಸರಿತಾ ಬಾಯಿಗೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಲಾಗಿದೆ. ಇದು ಸಂಶಯಕ್ಕೆ ಕಾರಣವಾಗಿದ್ದು, ಹತ್ಯೆ ನಡೆಸಿದ ಬಳಿಕ ಯುವತಿಯನ್ನು ನೇಣುಹಾಕಿದರೆ ಅನ್ನುವ ಸಂಶಯವನ್ನು ಉಳ್ಳಾಲ ಪೊಲೀಸರು ವ್ಯಕ್ತಪಡಿಸಿದ್ದಾರೆ. ಕೆಳಗಿನ ಮನೆಯಲ್ಲಿರುವ ವೃದ್ದ ಮಾಲೀಕರಿಗೆ ಯುವಕನೋರ್ವ ಮಧ್ಯಾಹ್ನ ಹಾಗೂ ರಾತ್ರಿ ಊಟ ತರುತ್ತಾನೆ. ಸರಿತಾ ವರ್ಮ ಮೃತದೇಹ ಪತ್ತೆಯಾದ ದಿನದಂದು ಆತ ಮಾತ್ರ ಕಂಪೌಂಡ್ ಪ್ರವೇಶಿಸಿರುವ ಕುರಿತು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಯುಡಿಆರ್ ದಾಖಲಿಸಿರುವ ಪೊಲೀಸರು ಸಂಶಯಾಸ್ಪದರನ್ನು ಠಾಣೆಗೆ ಕರೆಸಿ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ‌.

Related Posts

Leave a Reply

Your email address will not be published.