ಆರ್ಸೊ ಪತ್ರಿಕೋದ್ಯಮ, ಕಿಟಾಳ್ ಯುವ ಪ್ರಶಸ್ತಿ ಪ್ರದಾನ

“ಕೊಂಕಣಿ ಸಾಹಿತ್ಯ ಇಂದು ಈ ಮಟ್ಟಕ್ಕೆ ಬೆಳೆದು ನಿಲ್ಲಲು ಕೊಂಕಣಿ ಪತ್ರಿಕೆ ಮತ್ತು ನಿಯತಕಾಲಿಕೆಗಳು ಮುಖ್ಯ ಕಾರಣ. ಕೊಂಕಣಿ ಪತ್ರಿಕೊದ್ಯಮಕ್ಕೆ ಶತಮಾನದ ಇತಿಹಾಸವಿದೆ. ಕೊಂಕಣಿ ಬರಹಗಾರರಿಗೆ ಉತ್ತೇಜನ ನೀಡಿ, ಅವರನ್ನು ಸಾಹಿತಿಗಳನ್ನಾಗಿ ಮಾಡುವುದರಲ್ಲಿ ಕೊಂಕಣಿ ಪತ್ರಿಕೆಗಳ ಪ್ರಕಾಶಕರು ಮತ್ತು ಸಂಪಾದಕರ ಶ್ರಮ ಗಣನೀಯ. ಅವರ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸುವುದು ಉತ್ತಮ ಕೆಲಸ. ಹಿರಿಯ ಮತ್ತು ನಿವೃತ್ತ ಪತ್ರಕರ್ತರನ್ನು ಮಾತ್ರವಲ್ಲ, ಹಾಲಿ ಪತ್ರಕರ್ತರನ್ನೂ ಗುರುತಿಸಿ, ಗೌರವಿಸುವ ಕೆಲಸ ಆಗಬೇಕಾಗಿದೆ” ಎಂದು ಅಮೆರಿಕಾದ ಚಿಕಾಗೊದಿಂದ ಪ್ರಕಟವಾಗುವ ಕೊಂಕಣಿಯ ಏಕೈಕ ಡಿಜಿಟಲ್ ವಾರಪತ್ರಿಕೆ ’ವೀಜ್ ಕೊಂಕಣಿ’ ಸಂಪಾದಕ – ಪ್ರಕಾಶಕ ಲ| ಡಾ| ಆಸ್ಟಿನ್ ಪ್ರಭು ಅಭಿಪ್ರಾಯಪಟ್ಟರು.

ಡಾ| ಪ್ರಭು, ಮಂಗಳೂರಿನ ಜೆಪ್ಪು ಮರಿಯ ಜಯಂತಿ ಮಂದಿರದಲ್ಲಿ , ಶ್ರೀ ಆವಿಲ್ ರಸ್ಕೀನ್ಹಾ ಇವರಿಗೆ 2022 ರ ಆರ್ಸೊ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತಿದ್ದರು.ಮೂಡುಬೆಳ್ಳೆಯ ಕ್ಲೈವ್ ಲ್ಯಾರಿ ಡಿ’ಸೊಜಾ ಇವರಿಗೆ 2022 ರ ಶ್ರೀ ಲಿಯೋ ರೊಡ್ರಿಗಸ್ ಕುಟುಂಬ ದತ್ತಿ ಕಿಟಾಳ್ ಯುವ ಪುರಸ್ಕಾರವನ್ನು ಅಬುದಾಬಿಯ ಅನಿವಾಸಿ ಉದ್ಯಮಿ ಸಿ.ಎ. ವಲೇರಿಯನ್ ದಲ್ಮೇದಾ ಪ್ರದಾನ ಮಾಡಿದರು.

” ಕೊಂಕಣಿ ಸಮರ್ಥಕ ಮತ್ತು ಮಹಾಪೋಷಕ ಶ್ರೀ ಲಿಯೊ ರೊಡ್ರಿಗಸ್ ಅವರನ್ನು ನಾನು ವಿದ್ಯಾರ್ಥಿ ದೆಸೆಯಿಂದಲೇ ಬಲ್ಲೆ. ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಅವರ ಕುಟುಂಬದ ಕೊಡುಗೆ ಅನನ್ಯವಾದುದು. ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿ ಕೂಡಾ ಕೆ.ಸಿ.ಒ ದಂತಹ ಸೇವಾಸಂಘಟನೆಗಳ ಮೂಲಕ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರವಲ್ಲ, ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೂಡಾ ಅವರು ನೀಡುತ್ತಿರುವ ಸಹಾಯಹಸ್ತ ಬಹಳ ದೊಡ್ದದು. ಈ ಕಾರ್ಯಕ್ರಮದಲ್ಲಿ ಅವರನ್ನು ಪ್ರತಿನಿಧಿಸಲು ಹೆಮ್ಮೆಯೆನಿಸುತ್ತದೆ” ಎಂದು ಸಿ.ಎ. ದಲ್ಮೇದಾ ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ತಜ್ಞ ಶ್ರೀ ಸ್ಟೀವನ್ ಪಿಂಟೊ ಮತ್ತು ಶಿಕ್ಷಣ ಕ್ಷೇತ್ರದ ತಜ್ಞ ಶ್ರೀ ಓಸ್ವಲ್ಡ್ ರೊಡ್ರಿಗಸ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.ವೇದಿಕೆಯಲ್ಲಿ ಕಿಟಾಳ್ ಸಂಪಾದಕ ಎಚ್ಚೆಮ್, ಪೆರ್ನಾಲ್, ಆರ್ಸೊ ಸಂಪಾದಕ ವಿಲ್ಸನ್,ಕಟೀಲ್ ಮತ್ತು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಕವಿ – ಚಿಂತಕ ಟೈಟಸ್ ನೊರೊನ್ಹಾ ಹಾಜರಿದ್ದರು.

Related Posts

Leave a Reply

Your email address will not be published.