ಡಿ. 24,25 ರಂದು ಶೂನ್ಯ ತ್ಯಾಜ್ಯ ಪರಿಕಲ್ಪನೆಯಡಿಯಲ್ಲಿ ಕೋಟಿ-ಚೆನ್ನಯ ಕಂಬಳ
ಮೂಡುಬಿದಿರೆ ಡಿ. 24,25ರಂದು ನಡೆಯುವ ಕೋಟಿ-ಚೆನ್ನಯ ಕಂಬಳದಲ್ಲಿ ಏಕ ಬಳಕೆಯ ವಸ್ತುಗಳನ್ನು ಬಳಸದ ಮರುಬಳಕೆಯ ವಸ್ತುಗಳನ್ನು ಬಳಸುವ ಮೂಲಕ ಶೂನ್ಯ ತ್ಯಾಜ್ಯದ ಕಂಬಳವನ್ನಾಗಿ ಆಯೋಜಿಸಿ ಮಾದರಿಯಾಗುವಂತೆ ಮಾಡಲು ತಾವು ಸಂಪೂರ್ಣವಾಗಿ ಬೆಂಬಲವನ್ನು ನೀಡುತ್ತೇವೆಂದು ವ್ಯಾಪಾರಸ್ಥರ ಪರವಾಗಿ ಭರತ್ ಅವರು ಭರವಸೆಯನ್ನು ನೀಡಿದ್ದಾರೆ.
ಒಂಟಿಕಟ್ಟೆಯ ರಾಣಿ ಅಬ್ಬಕ ಸಂಸ್ಕೃತಿ ಗ್ರಾಮದಲ್ಲಿ ನಡೆಯಲಿರುವ ಹೊನಲು ಬೆಳಕಿನ ಕಂಬಳವನ್ನು ಶೂನ್ಯ ತ್ಯಾಜ್ಯ ಮಾಡುವ ನಿಟ್ಟಿನಲ್ಲಿ ಕಂಬಳ ಸಮಿತಿ ಹಾಗೂ ಪುರಸಭೆಯು ಕಂಬಳ ಕ್ರೀಡಾಂಗಣದ ಗುತ್ತು ಮನೆಯಲ್ಲಿ ಬುಧವಾರ ವ್ಯಾಪಾರಸ್ಥರಿಗೆ, ಸ್ವಯಂ ಸೇವಕರಿಗೆ ಮತ್ತು ಪರಿಸರ ಪೂರಕ ಮಾರಾಟಗಾರರಿಗೆ ಕರೆದ ನಡೆಸಿದ ಸಭೆಯಲ್ಲಿ ವ್ಯಾಪಾರಸ್ಥರು ಒಪ್ಪಿಗೆಯನ್ನು ಸೂಚಿಸಿದ್ದಾರೆ.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ವ್ಯಾಪಾರಸ್ಥರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿ ವಶ ಮಾಡಿ ಸ್ವಚ್ಛ ಮೂಡುಬಿದಿರೆಗಾಗಿ ಎಲ್ಲರೂ ಶ್ರಮಿಸಿ, ಮಾರ್ಕೆಟಿಗೆ ಹೋಗುವಾಗ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಬಳಸದೆ ಬಟ್ಟೆಯ ಚೀಲಗಳನ್ನು ಬಳಸಿ, ಒಟ್ಟಾರೆಯಾಗಿ ಈ ಬಾರಿಯ ಕಂಬಳದಲ್ಲಿ ಶೂನ್ಯ ತ್ಯಾಜ್ಯದ ಕಡೆಗೆ ಎಲ್ಲರ ಚಿತ್ತವಿರಲಿ ಎಂದರು.
ಮೂಡುಬಿದಿರೆ ಕೋಟಿ-ಚೆನ್ನಯ ಕಂಬಳ ಸಮಿತಿಯ ಕಾರ್ಯದರ್ಶಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಮಾತನಾಡಿ ಮೂಡುಬಿದಿರೆ ಪುರಸಭೆಯು ಸ್ವಚ್ಛ ಮೂಡುಬಿದಿರೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ ಎಂದರು.
ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ನೇತಾಜಿ ಬ್ರಿಗೇಡ್‍ನ ರಾಹುಲ್ ಕುಲಾಲ್, ಉದ್ಯಮಿ ಗೋಪಾಲ್ ಎಂ., ಉದ್ಯಮಿ ಕಿರಣ್, ಸ್ಪೂರ್ತಿ ವಿಶೇಷ ಶಾಲೆಯ ಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಮತ್ತು ವ್ಯಾಪಾರಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.