ನಮ್ಮದು ಜನರಿಗೆ ಸ್ಪಂದಿಸುವ ಸರ್ಕಾರ : ಬೊಮ್ಮಾಯಿ
ಕುಂದಾಪುರ: ಜನಪ್ರಿಯ ಸರ್ಕಾರವಿದ್ದರೆ, ಜನಪರ ನಾಯಕ ಅದರ ಮುಖ್ಯಸ್ಥನಾದರೆ ಯಾವ ರೀತಿ ಜನಸ್ಪಂದನೆ ಸಿಗುತ್ತದೆ ಎನ್ನುವುದಕ್ಕೆ ಈ ಬೈಂದೂರಿನ ಅಭಿವೃದ್ದಿಯ ಕತೆಯೇ ಸಾಕ್ಷಿ. ನಮ್ಮ ಸರ್ಕಾರದÀ ಅಭಿವೃದ್ದಿಯ ಕೆಲಸಗಳು ನಿಮ್ಮ ಮುಂದಿವೆ. ಕೇಂದ್ರ, ರಾಜ್ಯ ಸರ್ಕಾರದಂತೆ ಬೈಂದೂರಿನಲ್ಲಿಯೂ ಸಂಸದ ಹಾಗೂ ಶಾಸಕರ ಡಬಲ್ ಇಂಜಿನ್ ಸಮನ್ವಯತೆ ಇದೆ. ಇದು ಕೇವಲ ಬಾಯಿ ಮಾತಿನ ಸರ್ಕಾರವಲ್ಲ, ನಮ್ಮದು ಜನರಿಗೆ ಸ್ಪಂದಿಸುವ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ನಗು ಸಿಟಿಯಲ್ಲಿ ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾಡಳಿದ ವತಿಯಿಂದ ನಡೆದ ಮನೆಮನೆಗೆ ಕುಡಿಯುವ ನೀರು, ಮರವಂತೆ ಮೀನುಗಾರಿಕಾ ಬಂದರು, ಏತನೀರಾವರಿ ಯೋಜನೆಯ ಸಹಿತ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು, ಬೈಂದೂರು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ರಾಜ್ಯದ ಬಿಜೆಪಿ ಸರ್ಕಾರ ಅನೇಕ ಕೊಡುಗೆಗಳನ್ನು ನೀಡಿದೆ. ಐದು ನದಿಗಳು ಹರಿಯುವ ಬೈಂದೂರು ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿಗೆ ಇದ್ದ ಸಮಸ್ಯೆಗೆ ಇದೀಗ ಪರಿಹಾರವಾಗಿರುವುದು ಸಂತೋಷ ತಂದಿದೆ. ಅಡಕೆಗಳಿಗೆ ಬಂದಿರುವ ಎಲೆ ಚುಕ್ಕಿ ರೋಗದಿಂದ ಶೇಕಡಾ 60ಕ್ಕೂ ಹೆಚ್ಚು ಬೆಳೆಗಾರರು ಕಂಗಾಲಾಗಿದ್ದು, ಸರ್ಕಾರ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಂಸದ ಬಿವೈ ರಾಘವೇಂದ್ರ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕರಾವಳಿ ಭಾಗವನ್ನು ಹೊಂದಿರುವ ಬೈಂದೂರು ಕ್ಷೇತ್ರದ ಅಭಿವೃದ್ದಿಗಾಗಿ ಸಾಕಷ್ಟು ಯೋಜನೆಗಳನ್ನು ಜೋಡಿಸಲಾಗಿದ್ದು, 251.46 ಕೋಟಿ. ರೂ.ಗಳ ಯೋಜನೆಗಳು ಇಂದು ಉದ್ಘಾಟನೆಗೊಂಡಿದೆ. 1,095.16 ಕೋಟಿ ರೂ. ಯೋಜನೆಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬೈಂದೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನಗಳು ಹಾಗೂ ಯೋಜನೆಯನ್ನು ಬಳಸಿಕೊಂಡು ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಬೈಂದೂರು ಶಾಸಕ ಬಿಎಂ ಸುಕುಮಾರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಗೋವಿಂದ ಎಂ. ಕಾರಜೋಳ, ಎಸ್ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ದಿ ಪ್ರಾಧಿಖಾರ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ. ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ದಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಪರಿಷತ್ ಸದಸ್ಯ ರವಿಕುಮಾರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬಿ ಗುಂಗೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ನಿರ್ದೇಶಕ ಮೃತ್ಯುಂಜಯ ಸ್ವಾಮಿ, ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಾಚಾರ್ಯ, ಜಿಲ್ಲಾ ಪಒಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೇಂದ್ರ, ಉಪವಿಭಾಗಾಧಿಕಾರಿ ರಾಜು ಕೆ ಉಪಸ್ಥಿತರಿದ್ದರು.