ಕೆಳಮಟ್ಟದ ರಾಜಕಾರಣ ಯಾರೂ ಮಾಡಬಾರದು : ಗೋಪಾಲ ಪೂಜಾರಿ
ಕುಂದಾಪುರ: ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮಂಜೂರು ಮಾಡಿದ ಕೆಲವು ಯೋಜನೆಗಳನ್ನು ಇಂದು ಮುಖ್ಯಮಂತ್ರಿಗಳ ಮೂಲಕ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಡಳಿತ ಜನತೆಗೆ ತಪ್ಪು ಮಾಹಿತಿ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಇಂತಹ ಕೆಳಮಟ್ಟದ ರಾಜಕಾರಣ ಹಿಂದೆ ಯಾವೊಬ್ಬ ಜನಪ್ರತಿನಿಧಿಯೂ ಮಾಡಿಲ್ಲ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಬೇಸರ ವ್ಯಕ್ತಪಡಿಸಿದರು.
ಅವರು ನಗರದ ಖಾಸಗಿ ಹೋಟೇಲ್‍ನಲ್ಲಿ ಕರೆಯಲಾದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.ಸೌಡ ಸೇತುವೆ, ಹಳ್ಳಿಹೊಳೆಯ ಕಬ್ಬಿನಾಲೆ ಸೇತುವೆ, ಎಲ್ಲೂರು ಮೆಸ್ಕಾಂ ಉಪವಿಭಾಗ ನನ್ನ ಅವಧಿಯಲ್ಲಿ ಮಂಜೂರಾಗಿ ಶಿಲಾನ್ಯಾಸ ನಡೆದಿದ್ದರೂ ಈಗ ಮರು ಶಿಲಾನ್ಯಾಸ ನಡೆಯುತ್ತಿದೆ. ಈಗಾಗಲೇ ಎಲ್ಲೂರು ಸಬ್ ಸ್ಟೇಶನ್ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯೂ ಇತ್ತೀಚೆಗಷ್ಟೇ ನಡೆದಿದೆಮ ನನ್ನ ಶ್ರಮದಲ್ಲಾದ ಈ ಯೋಜನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಸೌಜನ್ಯಕ್ಕೂ ಆಹ್ವಾನಿಸಿಲ್ಲ. ನಾನು ತಂದ ಯೋಜನೆಗಳಿಗೆ ಇಂದು ಮುಖ್ಯಂತ್ರಿಗಳ ಮುಖೇನ ಚಾಲನೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಪೂಜಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಜಿಲ್ಲಾ ವಕ್ತಾರ ವಿಕಾಸ್ ಹೆಗ್ಡೆ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಇದ್ದರು