ಕುಂದಾಪುರ: ಲಕ್ಷಾಂತರ ರೂ. ಮೌಲ್ಯದ ಚಿನ್ನ ಕದ್ದ ಆರೋಪಿ ಅಂದರ್
ಕುಂದಾಪುರ: ಕಟುಂಬಿಕರೆಲ್ಲರೂ ತೀರ್ಥ ಯಾತ್ರೆಗೆ ತೆರಳಿದ್ದ ಸಂದರ್ಭ ಮನೆಯ ಹಿಂಬದಿಯ ಬಾಗಿಲು ಒಡೆದು ಚಿನ್ನಾಭರಣ ಹಾಗೂ ನಗದು ಕಳವುಗೈದು ಪರಾರಿಯಾದ ಕಳ್ಳನನ್ನು ಸೆರೆ ಹಿಡಿಯುವಲ್ಲಿ ಕುಂದಾಪುರ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ಮರವಂತೆ ನಿವಾಸಿ, ಪ್ರಸ್ತುತ ಕುಂಭಾಶಿ ವಿನಾಯಕ ನಗರಲ್ಲಿರುವ ಸುಭಾಶ್ಚಂದ್ರ ಆಚಾರ್ಯ (40) ಬಂಧಿತ ಆರೋಪಿ. 8 ಗ್ರಾಂ ತೂಕದ ಚಿನ್ನದ ಬ್ರಾಸ್ಲೈಟ್, 12 ಗ್ರಾಂ ತೂಕದ ಪೆಂಡೇಂಟ್ ಇರುವ ರೋಪ್ ಚೈನ್, 4 ಗ್ರಾಂ, 3 ಗ್ರಾಂ ತೂಕದ ಚಿನ್ನದ ಉಂಗುರ, 1610 ರೂ. ನಗದನ್ನು ಪೊಲೀಸರು ವಶಪಡಿಕೊಂಡಿದ್ದಾರೆ.
ಕುಂಭಾಶಿಯ ವಿನಾಯಕ ನಗರದ ನಿವಾಸಿ ಮಂಜುನಾಥ ಜೋಗಿ ಎಂಬವರು ಜುಲೈ 29 ರಂದು ಕುಟುಂಬ ಸಮೇತರಾಗಿ ಪಂಡರಾಪುರ ಮತ್ತು ಶಿರ್ಡಿ ದೇವಸ್ಥಾನಕ್ಕೆ ತೀರ್ಥಯಾತ್ರೆ ತೆರಳಿದ್ದು ಆ.5 ರಂದು ಮನೆಗೆ ವಾಪಸ್ಸಾದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯ ಹಿಂಬದಿಯ ಬಾಗಿಲು ಹಾಗೂ ಅಡುಗೆ ಮನೆಯ ಬಾಗಿಲನ್ನು ಒಡೆದು ಮನೆಯ ಕಪಾಟಿನಲ್ಲಿರಿಸಿದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಪಾಟಿನಲ್ಲಿದ್ದ 1 ಲಕ್ಷದ 20 ಸಾವಿರ ಮೌಲ್ಯದ ಒಟ್ಟು 27 ಗ್ರಾಂ ಚಿನ್ನಾಭರಣಗಳು ಮತ್ತು 13,500 ರೂ. ನಗದು ಹಣವನ್ನು ಕಳವು ಮಾಡಲಾಗಿತ್ತು.
ದಿಕ್ಕು ತಪ್ಪಿಸಲು ಬೇರೆಯವರ ಚಪ್ಪಲಿ ಇಟ್ಟಿದ್ದ!:
ಕಳ್ಳತನ ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಆರಂಭದಲ್ಲಿ ಸ್ಥಳೀಯರೇ ಈ ಕೃತ್ಯ ನಡೆಸಿರುವುದು ದೃಢಪಟ್ಟಿತು. ಪೊಲೀಸರ ದಿಕ್ಕು ತಪ್ಪಿಸಲು ಆರೋಪಿ ನೆರೆಮನೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಯುವಕನೋರ್ವನ ಚಪ್ಪಲಿಯನ್ನು ಕಳ್ಳತನ ನಡೆಸಿದ ಬಳಿಕ ಅಡುಗೆ ಮನೆಯಲ್ಲಿ ಇಟ್ಟು ಆ ಯುವಕನ ಮೇಲೆ ಸಂಶಯ ಬರುವಂತೆ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದ. ಚಪ್ಪಲಿ ಕಳ್ಳತನವಾಗಿರುವ ಬಗ್ಗೆ ನೆರೆಮನೆಯ ಯುವಕ ಪೊಲೀಸರ ಗಮನಕ್ಕೆ ತಂದಿದ್ದು, ಆ ಯುವಕ ನೀಡಿದ ಕೆಲವು ಮಹತ್ತರ ಸುಳಿವುಗಳಿಂದಾಗಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಆರೋಪಿ ಸುಭಾಶ್ಚಂದ್ರ ಆಚಾರ್ ಮನೆ ಕಟ್ಟುತ್ತಿದ್ದು ಹಣಕ್ಕಾಗಿ ತನ್ನ ಮನೆಯ ಸಮೀಪದ ಮನೆ ಕಳ್ಳತನ ನಡೆಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ. ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಈತ ಕಳವು ಕೃತ್ಯದ ಬಳಿಕ ಕೆಲಸಕ್ಕೆ ಹೋಗಿರಲಿಲ್ಲ. ಈತನ್ಮಧ್ಯೆ ಈತನ ಬ್ಯಾಂಕ್ ಖಾತೆಗೆ 20 ಸಾವಿರ ಹಣ ವರ್ಗಾವಣೆ ಕೂಡ ಆಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಈತನ ಮೇಲೆ ಸಂಶಯ ಮೂಡಿದ್ದು ನಿಗಾವಹಿಸಿ ತಾಂತ್ರಿಕ ಸಹಾಯದ ಮೂಲಕ ಇನ್ನಷ್ಟು ನಿಖರಗೊಳಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ಈ ಹಿಂದೆ ಈತನ ಮೇಲೆ ಯಾವುದೇ ಅಪರಾಧ ಕೃತ್ಯಗಳಿಲ್ಲ.
ತನಿಖಾ ತಂಡ ರಚನೆ..
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣವರ್ಧನ್ ಎನ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಶ್ರೀಕಾಂತ ಕೆ., ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ. ನಿರ್ದೇಶನದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ತನಿಖಾ ವಿಭಾಗದ ಉಪನಿರೀಕ್ಷಕ ಪ್ರಸಾದ್ ಕುಮಾರ್ ಕೆ ಹಾಗೂ ಕಾನೂನು ಸುವ್ಯವಸ್ಥೆ ಪಿಎಸ್ಐ ಸದಾಶಿವ ಆರ್ ಗವರೋಜಿ ನೇತೃತ್ವದಲ್ಲಿ ಅಪರಾಧ ಪತ್ತೆದಳ ತಂಡದ ಸಿಬ್ಬಂದಿಗಳಾದ ಸಂತೋಷ ಕುಮಾರ್ ಕೆ.ಯು, ಸಂತೋಷ ಕುಮಾರ್, ರಾಘವೇಂದ್ರ ಬೈಂದೂರು, ಅವಿನಾಶ್, ರಾಮ ಪೂಜಾರಿ ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆ.10 ರಂದು ಗೋಪಾಡಿ ಸಮೀಪದಲ್ಲಿ ಬಂಧಿಸಿದ್ದಾರೆ.