ಕುಂಜತ್ತೂರಿನಲ್ಲಿ ನಿರ್ಮಾಣಗೊಂಡ ಅಂಡರ್ ಪಾಸ್ ನಿಂದ ಸಂಚರಿಸಲು ತೊಂದರೆ

ಮಂಜೇಶ್ವರ: ಕುಂಜತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಡರ್ ಪಾಸ್ ನಿಂದ ಬುಧವಾರ ಬೆಳಗ್ಗಿನಿಂದ ವಾಹನ ಸಂಚಾರ ಆರಂಭಗೊಂಡಿತು.ಅಂಡರ್ ಪಾಸ್ ನೀಡುವುದಾಗಿ ಅಧಿಕಾರಿಗಳ ಭಾಗದಿಂದ ಹಸಿರು ನಿಶಾನೆ ಲಭಿಸಿದಾಗ ಸ್ಥಳೀಯರು ಅತೀವ ಸಂತೋಷಪಟ್ಟಿದ್ದರೂ ಈ ರೀತಿಯ ಅಂಡರ್ ಪಾಸ್ ಸಿಗಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲವೆಂಬುದಾಗಿ ಜನರು ಆಡಿಕೊಳ್ಳುತಿದ್ದಾರೆ.
ಅಂಡರ್ ಪಾಸ್ ಅಗಲ ಕಿರಿದಾಗಿದ್ದು ಎರಡು ಲಘು ವಾಹನಗಳು ಮುಖಾಮುಖಿಯಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಬುಧವಾರ ಬೆಳಿಗ್ಗೆ ಎರಡು ವಾಹನಗಳು ಮುಖಾಮುಖಿಯಾಗಿ ಸಂಚರಿಸಲು ಸಾಧ್ಯವಾಗದೇ ತಾಸುಗಳ ತನಕ ಅಲ್ಲೇ ಉಳಿದು ಬಳಿಕ ಊರವರು ಹರ ಸಾಹಸ ಪಟ್ಟು ವಾಹನ ತೆರವುಗೊಳಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಅಧಿಕೃತರು ಎರಡು ಲಘು ವಾಹನಗಳು ಮುಖಾಮುಖಿ ಸಂಚರಿಸಲು ಯಾವುದೇ ತಡೆ ಇರಲಾರದೆಂದು ವಾಗ್ದಾನ ನೀಡಿದ್ದರೂ ಈಗ ಎಲ್ಲವೂ ಠುಸ್ ಆದಂತೆ ಕಾಣುತ್ತಿದೆ.
ಎರಡನೇಯದಾಗಿ ಅಂಡರ್ ಪಾಸಿನಿಂದ ವಾಹನಗಳು ಹೊರ ಬರುವಾಗ ಸರ್ವೀಸ್ ರಸ್ತಯಿಂದ ಆಗಮಿಸುವ ವಾಹನಗಳನ್ನು ಕಾಣದೇ ಇರುವ ಹಿನ್ನೆಲೆಯಲ್ಲಿ ಭಾರೀ ಅಪಘಾತಗಳು ಸಂಭವಿಸುವ ಹೆಚ್ಚಿನ ಸಾಧ್ಯತೆಗಳು ಇಲ್ಲಿ ಕಂಡು ಬರುತ್ತಿವೆ. ಈ ವಿಷಯದಲ್ಲೂ ಅಧಿಕೃತರು ವಾಹನ ಸಂಚಾರದ ಸುರಕ್ಷತೆಯನ್ನು ಕಾಪಾಡಿಕೊಂಡು ಅಂಡರ್ ಪಾಸ್ ನಿರ್ಮಿಸುವುದಾಗಿ ಹೇಳಿದ್ದರು. ಆದರೆ ಅದು ಕೂಡಾ ಇಲ್ಲಿ ಫಲಪ್ರದವಾಗಲಿಲ್ಲವೆಂಬುದಾಗಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಹೆದ್ದಾರಿ ಹೋರಾಟ ಸಮಿತಿ ನೇತಾರ ಅಶ್ರಫ್ ಬಡಾಜೆ ಹೇಳಿದರು. ಈ ಸಂದರ್ಭ ಹೋರಾಟ ಸಮಿತಿ ನೇತಾರರಾದ ಜಬ್ಬಾರ್ ಪದವು, ಹಸೈನಾರ್, ಬಶೀರ್ ಎಸ್ ಎಂ, ಅಲಿಕುಟ್ಟಿ, ಅಶ್ರಪ್ ಕುಂಜತ್ತೂರು, ಬಾಪನ್ ಕುಂಞ ಸೇರಿದಂತೆ ಹಲವರು ಜೊತೆಗಿದ್ದರು.
