ನಗರದ ಲಾಲ್ ಭಾಗ್ ಸಿಗ್ನಲ್ ಬಳಿ ಬಸ್ ಚಕ್ರ ಹರಿದು ಬಾಲಕನ ಸಾವು

ಖಾಸಗಿ ಬಸ್ ಚಾಲಕನ ಅತಿ ವೇಗ ಮತ್ತು ಧಾವಂತದ ಚಾಲನೆಗೆ ಎಂಟನೇ ತರಗತಿಯ ವಿದ್ಯಾರ್ಥಿ ನಡು ರಸ್ತೆಯಲ್ಲಿ ದುರಂತವಾಗಿ ಮೃತಪಟ್ಟ ಘಟನೆ ನಗರದ ಲಾಲ್ ಭಾಗ್ ವೃತ್ತದ ಬಳಿ ನಡೆದಿದೆ.
ಮೃತ ಬಾಲಕನನ್ನು ಪಡೀಲ್ ಕಣ್ಣೂರಿನ ನಿವಾಸಿ ಕರುಣಾಕರ ಬೆಳ್ಚಡ ಅವರ ಪುತ್ರ ರಕ್ಷಣ್(13) ಎಂದು ಗುರುತಿಸಲಾಗಿದೆ. ಪಡೀಲಿನ ಕಪಿತಾನಿಯೋ ಸ್ಕೂಲಿನಲ್ಲಿ ಎಂಟನೇ ತರಗತಿ ಓದುತ್ತಿದ್ದ ರಕ್ಷಣ್ ಇವತ್ತು ಮನೆಯಲ್ಲಿ ಪೂಜೆ ಇದೆಯೆಂದು ಶಾಲೆಗೆ ರಜೆ ಹಾಕಿದ್ದ. ಬೆಳಗ್ಗೆ ಚಿಕ್ಕಪ್ಪ ಪಡು ಬೊಂಡಂತಿಲ ನಿವಾಸಿ ನಾರಾಯಣ ಎಂಬವರ ಜೊತೆಗೆ ಪೂಜೆಯ ಸಾಮಾನು ತರಲೆಂದು ಬೈಕಿನಲ್ಲಿ ಮಂಗಳೂರಿಗೆ ಬಂದಿದ್ದ, ಇವರು ಉರ್ವಾ- ಲೇಡಿಹಿಲ್ ಕಡೆಯಿಂದ ಲಾಲ್ ಬಾಗಿನತ್ತ ಬರುತ್ತಿದ್ದಾಗ, ಹಿಂದಿನಿಂದ ಯಮದೂತನಂತೆ ಧಾವಿಸಿ ಬಂದ ಖಾಸಗಿ ಬಸ್ ಪಬ್ಬಾಸ್ ಎದುರಿನ ಅಶ್ವತ್ಧ ಕಟ್ಟೆಯ ಬಳಿ ಬೈಕಿಗೆ ಡಿಕ್ಕಿಯಾಗಿದೆ. ಬೈಕಿಗೆ ಡಿಕ್ಕಿಯಾದ ರಭಸಕ್ಕೆ ಹಿಂದೆ ಕುಳಿತಿದ್ದ ರಕ್ಷಣ್ ರಸ್ತೆಗೆ ಎಸೆಯಲ್ಪಟ್ಟಿದ್ದು ಆತನ ಮೇಲಿಂದಲೇ ಬಸ್ ಹರಿದಿದೆ. ಬೈಕ್ ಸವಾರ ನಾರಾಯಣ ಎಡದ ಭಾಗಕ್ಕೆ ವಾಲಿ ಬಿದ್ದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ರಕ್ಷಣ್ ಸ್ಥಳದಲ್ಲೇ ದುರಂತ ಸಾವು ಕಂಡಿದ್ದಾನೆ. ಈ ಕುರಿತು ಸಂಚಾರಿ ವಿಭಾಗದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.