ಕೃಷ್ಣನ ಹುಟ್ಟುಹಬ್ಬಕ್ಕಾಗಿ ಲತಾ ಮನೆಯವರಿಂದ ಮೂಡೆ
ಶ್ರೀ ಕೃಷ್ಣ ಜನ್ಮಾಷ್ಟಮಿಗಾಗಿ ಎರ್ಮಾಳಿನಲ್ಲಿ ಲತಾ ಮನೆಮಂದಿ ಸೇರಿ ಕೊಟ್ಟೆ ಕಡುಬು ತಯಾರಿಯಲ್ಲಿ ತೊಡಗಿದ್ದಾರೆ. ಕೃಷ್ಣ ಜನ್ಮಾಷ್ಟಮಿ ದಿನ ತುಳುವಿನ ಮೂಡೆ ಕನ್ನಡದ ಕೊಟ್ಟೆ ಕಡುಬು ಮಾಡುವುದು ವಾಡಿಕೆ. ಯದುನಂದನನಿಗೆ ಪ್ರಿಯವಾದ ತಿಂಡಿಗಳಲ್ಲಿ ಮೂಡೆಯೂ ಒಂದಾಗಿದ್ದು, ಅಷ್ಟಮಿಯಂದು ಕರಾವಳಿಯ ಎಲ್ಲರ ಮನೆಯಲ್ಲೂ ಮೂಡೆ ಘಮಘಮಿಸುತ್ತಿರುತ್ತದೆ. ಕೇದಗೆ ವರ್ಗದ ಮುಂಡೇವು ಮುಂಡಕ ಎಲೆ, ಪೆÇದರುಗಳು ತುಳುನಾಡಿನಲ್ಲಿ ಮುಖ್ಯವಾಗಿ ತೋಡು ತೊರೆಗಳ ದಂಡೆಗಳಲ್ಲಿ ಕಂಡು ಬರುತ್ತವೆ. ಕೆರೆ ಇತ್ಯಾದಿ ಎಂದು ನೀರ ನೆರೆಯಲ್ಲಿ ಇವು ಇರುತ್ತವೆ. ಒಂದು ಮಾರುದ್ದದ ಇದರ ಎಲೆಗಳು ನಡು ಹಿಂಬದಿ ಮತ್ತು ಅಂಚಿನಲ್ಲಿ ಸಾಲು ಮುಳ್ಳುಗಳಿಂದ ತುಂಬಿರುತ್ತದೆ. ಈ ಮುಳ್ಳುಗಳು ಮುಮ್ಮುಖ ಬಾಗಿರುವುದರಿಂದ ಹಿಮ್ಮುಖ ಎಳೆಯದಂತೆ ಲಾವಗದಿಂದ ಕೈ ಬಳಸಿ ಈ ಎಲೆಗಳನ್ನು ಕತ್ತರಿಸಿ, ಎಳೆದು ತರಬೇಕು. ಮುಳ್ಳುಗಳ ಸಾಲನ್ನು ಕತ್ತಿಯಿಂದ ಸವರಿ ತೆಗೆಯಬೇಕು. ಬಿಸಿಲಿನಲ್ಲಿ ಒಣಗಿಸಿ, ಬೆಂಕಿಯಲ್ಲಿ ತುಸು ಬಾಡಿಸಿದರೆ ಎಲೆ ಸಿದ್ಧ. ಸುಮಾರು ಎರಡಂಗುಲ ಅಗಲದ ಎಲೆಯನ್ನು ಮೇಲು ಮೇಲಕ್ಕೆ ಸುತ್ತುತ್ತ ಮುಳ್ಳು ಊರಿ ಉರುಟು ಕೊಟ್ಟೆ ಕಟ್ಟುವುದು ಒಂದು ಕಲೆ.
ಕರ್ಕಟೆ ಮುಳ್ಳು, ತೆಂಗಿನ ಗರಿಯ ಕಡ್ಡಿ ಬಳಸಿ ಕೊಟ್ಟೆ ಕಟ್ಟುವರು. ಕೊಟ್ಟು ಎಂದರೆ ದ್ರಾವಿಡ ಭಾಷೆಯಲ್ಲಿ ತಟ್ಟು, ಹೊಡಿ, ಕಡಿ, ಚುಚ್ಚು ಎಂದೆಲ್ಲ ಅರ್ಥವಿದೆ. ಇಲ್ಲಿ ಎಲೆ ಕಡಿದು, ಎಲೆ ಮುಳ್ಳು ಹೊಡೆದು, ಬಿಸಿಗೆ ಬಾಡಿಸಿ ಬಡಿದು, ಮುಳ್ಳು ಇಲ್ಲವೇ ಕಡ್ಡಿ ಚುಚ್ಚಿ ಇದನ್ನು ತಯಾರಿಸುತ್ತಾರೆ. ಹಾಗಾಗಿ ಇದು ಕೊಟ್ಟೆ ಒಂದು ರೀತಿಯ ತೊಟ್ಟೆ ಎಂಬ ಅನ್ವರ್ಥ ನಾಮವನ್ನು ಪಡೆದಿದೆ.
ಖರೀದಿದಾರರು ಮೂಡೆ ಕೊಟ್ಟೆ ಬೆಲೆ ಹೆಚ್ಚಾಗಿದೆ ಎಂದು ವಾದ ಮಾಡಿ ಮಾರಾಟಗಾರರನ್ನು ದೂಷಿಸುತ್ತಾ ಕೊಂಡುಕೊಳ್ಳುತ್ತಾರೆ. ಆದರೆ ಕೊಟ್ಟೆ ತಯಾರಿಕೆಯ ಹಿಂದಿರುವ ಪರಿಶ್ರಮ ಯಾರಿಗೂ ತಿಳಿದಿಲ್ಲ. ಅಷ್ಟಮಿಗೆ ಒಂದು ವಾರ ಇರುವಾಗಲೇ ಪೂರ್ವ ತಯಾರಿ ಆರಂಭ ಗೊಳ್ಳುತ್ತದೆ. ಕಾಡು ಮೇಡು ಆಳೆದು ಕೇದಿಗೆ ಎಲೆಯನ್ನು ತೆಗೆದುಕೊಂಡು ಬರುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಮನೆಯಲ್ಲಿ ಮೂಡೆ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಅಷ್ಟಮಿ ಹಿಂದಿನ ಮಾರುಕಟ್ಟೆಗೆ ಬಂದು ಮೂಡೆಯ ಕೊಟ್ಟೆ ತೆಗೆದುಕೊಂಡು ಹೋಗುತ್ತಾರೆ. ವರ್ಷದಿಂದ ವರ್ಷಕ್ಕೆ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಹಾಗಾಗಿ ಅದರ ದರದಲ್ಲಿಯೂ ಏರಿಕೆಯಾಗಿದೆ. ಉಡುಪಿ ರಥಬೀದಿ ಸುತ್ತ ಅಷ್ಟಮಿಯ ಎರಡು ದಿನದಲ್ಲಿ 50 ಸಾವಿರದಷ್ಟು ಮೂಡೆ ಕೊಟ್ಟೆ ಮಾರಾಟವಾಗುತ್ತದೆ. ಒರ್ವ ವ್ಯಾಪಾರಿ 3000 ರಿಂದ 4000 ಮೂಡೆ ಕೊಟ್ಟೆ ಮಾರಾಟ ಮಾಡುತ್ತಾರೆ.