ಮಳಲಿಪೇಟೆ ಮಸೀದಿ ವಿವಾದ ಪ್ರಕರಣ : ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯಿಂದ ಮೇಲ್ಮನವಿ ಸಲ್ಲಿಕೆಗೆ ನಿರ್ಧಾರ

ಮಳಲಿಪೇಟೆ ಮಸೀದಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು 3ನೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯವು ಬುಧವಾರ ನೀಡಿದ ತೀರ್ಪಿನ ವಿರುದ್ಧ ರಾಜ್ಯ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ತಿಳಿಸಿದ್ದಾರೆ.

ದ.ಕ.ಜಿಲ್ಲಾ ವಕ್ಫ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಕಾಯ್ದೆಯ ಪ್ರಕಾರ ವಕ್ಫ್‍ಗೆ ಸಂಬಂಧಿಸಿದ ಯಾವುದೇ ವಿವಾದ, ವಿಚಾರ, ಸಮಸ್ಯೆ ಅಥವಾ ಇತರ ಸಂಗತಿಗಳ ಬಗ್ಗೆ ಸಿವಿಲ್, ಕಂದಾಯ ನ್ಯಾಯಾಲಯ ಮತ್ತಿತರ ಪ್ರಾಧಿಕಾರದಲ್ಲಿ ಯಾವುದೇ ದಾವೆ ಹೂಡುವಂತಿಲ್ಲ. ಕಲಾಪ ನಡೆಸುವಂತಿಲ್ಲ. ಅದರಂತೆ ಮಳಲಿ ಮಸೀದಿ ವಿಚಾರಕ್ಕೆ ಸಂಬಂಧಿಸಿ ಸ್ಥಳೀಯರು 3ನೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ಮೊರೆ ಹೋದಾಗ ಮಸೀದಿಯ ಪರ ವಕೀಲರು ಇದನ್ನು ಪ್ರಶ್ನಿಸಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಬುಧವಾರ ಮಂಗಳೂರು ನ್ಯಾಯಾಲಯವು ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯವು ವಿಚಾರಣೆ ನಡೆಸಬಹುದು ಎಂದು ತಿಳಿಸಿದೆ. ಹಾಗಾಗಿ ಈ ಬಗ್ಗೆ ಕಾನೂನು ತಜ್ಞರ ಸಲಹೆಯನ್ನು ಪಡೆದು ಮತ್ತು ರಾಜ್ಯ ವಕ್ಫ್ ಬೋರ್ಡ್‍ನ ಜೊತೆ ಚರ್ಚೆ ನಡೆಸಿ ಇಂದಿನ ತೀರ್ಪನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಮೌಝಮ್ ಪಾಷಾ, ಮಳಲಿ ಮಸೀದಿಯ ಅಧ್ಯಕ್ಷ ಮುಹಮ್ಮದ್, ಉಪಾಧ್ಯಕ್ಷ ಎಂಎ ಅಬೂಬಕರ್, ಮಸೀದಿ ನವೀಕರಣ ಸಮಿತಿಯ ಕೋಶಾಧಿಕಾರಿ ಹಾಜಿ ಮೊಯ್ದಿನ್, ಮಾಜಿ ಮೇಯರ್ ಕೆ.ಅಶ್ರಫ್, ವಕ್ಫ್ ಸಲಹಾ ಸಮಿತಿಯ ಸದಸ್ಯರಾದ ಅಶ್ರಫ್ ಕಿನಾರ, ಸೈದುದ್ದೀನ್ ಬಜ್ಪೆ, ಹನೀಫ್ ಮಲ್ಲೂರು, ಮುಸ್ತಫಾ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.