ಶಾಲಾ ಮಕ್ಕಳ ವಾಹನ ಚಾಲಕರಿಗೆ ಜಾಗ್ರತಿ ಶಿಬಿರ

ದ. ಕ ಜಿಲ್ಲಾ ಶಾಲಾ ಮಕ್ಕಳ ಮಕ್ಕಳ ವಾಹನ ಚಾಲಕರ ಸಂಘ(ರಿ)ದ ಆಶ್ರಯದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ, ಮಂಗಳೂರು ನಗರ ಸಂಚಾರಿ ಪೋಲಿಸ್ ಇವರ ಸಹಯೋಗದೊಂದಿಗೆ ಶಾಲಾ ಮಕ್ಕಳ ವಾಹನ ಚಾಲಕರಿಗೆ ಜಾಗೃತಿ ಶಿಬಿರವು ಸಂಘದ ಅಧ್ಯಕ್ಷ ರಾದ ಮೋಹನ್ ಕುಮಾರ್ ಅತ್ತಾವರರವರ ಅಧ್ಯಕ್ಷತೆಯಲ್ಲಿ ಅತ್ತಾವರ ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.

ಶಿಬಿರದಲ್ಲಿ ಮಂಗಳೂರು ನಗರ ಸಹಾಯಕ ಪೋಲಿಸ್ ಅಯುಕ್ತರಾದ ಗೀತಾ.ಟಿ.ಕುಲಕರ್ಣಿಯವರು ಮಾತನಾಡುತ್ತಾ, ಸಮಾಜದಲ್ಲಿ ಚಾಲಕರ ಪಾತ್ರ ಭಾರೀ ಮಹತ್ವದ್ದಾಗಿದ್ದು,ವಾಹನ ಚಲಾವಣೆಯ ಸಂದರ್ಭದಲ್ಲಿಯೂ ಸಾರಿಗೆ ನಿಯಮಗಳನ್ನು ಪಾಲನೆ ಮಾಡುವಂತಹದ್ದು ಕೂಡ ಮಹತ್ವಪೂರ್ಣವಾಗಿದೆ ಎಂದು ಹೇಳಿದರು.

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ವಿಶ್ವನಾಥ ನಾಯ್ಕ್ ರವರು ಚಾಲಕ ವರ್ಗದ ಜವಾಬ್ದಾರಿಯನ್ನು ಒತ್ತಿ ಹೇಳುತ್ತಾ, ತನ್ನ ಹಾಗೂ ಇತರರ ಪ್ರಾಣಗಳನ್ನು ಉಳಿಸುವಲ್ಲಿ ಚಾಲಕರು ಕಟ್ಟುನಿಟ್ಟಿನ ಶಿಸ್ತನ್ನು ಪಾಲಿಸುವ ಮೂಲಕ ಸಾರಿಗೆ ಸಂಚಾರದ ನಿಯಮಗಳನ್ನು ಪಾಲಿಸಬೇಕಾಗಿದೆ.ಶಾಲಾ ಮಕ್ಕಳನ್ನು ಸಾಗಿಸಲು ಟೂರಿಸ್ಟ್ ವಾಹನಗಳನ್ನು ಬಳಸಬೇಕೇ ಹೊರತು ಖಾಸಗೀ ವಾಹನಗಳನ್ನು ಬಳಸಬಾರದು.ಒಂದು ವೇಳೆ ಅನಾಹುತಗಳು ಸಂಭವಿಸಿದರೆ ಭಾರೀ ಪರಿಣಾಮವನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ರವರು, ಕಳೆದ 7 ವರ್ಷಗಳಲ್ಲಿ ಬೆಳೆದು ಬಂದ ಶಾಲಾ ಮಕ್ಕಳ ವಾಹನ ಚಾಲಕರ ಸಂಘವು ನಿರಂತರವಾಗಿ ಚಾಲಕರಲ್ಲಿ ಕಾನೂನುಗಳ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಅವಿರತವಾಗಿ ಶ್ರಮವಹಿಸಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಮಂಗಳೂರು ನಗರ ಪೂರ್ವ ಸಂಚಾರಿ ಪೋಲೀಸ್ ಠಾಣಾ ನಿರೀಕ್ಷಕರಾದ ಗೋಪಾಲ್ ಕೃಷ್ಣ ಭಟ್, ಸಂಘದ ಮುಖಂಡರಾದ ರೆಹಮಾನ್ ಖಾನ್ ಕುಂಜತ್ತಬೈಲ್,ಸ್ಟೇನಿ ಮಿನೇಜಸ್,ಗಂಗಾಧರ ರೈ, ಕಿರಣ್ ಲೇಡಿಹಿಲ್ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.